ಸಾಮಾಜಿಕ ಕಳಕಳಿಯ ಸಂದೇಶಗಳನ್ನು ಹೊತ್ತು ತಂದ ಕ್ಯಾಲೆಂಡರ್


ರಾಜಕಾರಣಿಗಳು ವರ್ಷಕ್ಕೊಮ್ಮೆ ತಮ್ಮ ಅಭಿಮಾನಿಗಳು ಹಾಗೂ ಮಿತ್ರರಿಗೆ ನೀಡುವ ಕ್ಯಾಲೆಂಡರ್ ಹೇಗಿರುತ್ತವೆ ಎಂದು ವಿವರಿಸಿ ಹೇಳಬೇಕಾಗಿಲ್ಲ. ಭವಿಷ್ಯದಲ್ಲಿ ಬರುವ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಕ್ಯಾಲೆಂಡರ್ ತುಂಬಾ ಸ್ವಯಂ ಪರಾಕ್ ಮಾಡಿಕೊಂಡ ಸಾಲುಗಳು ಹಾಗೂ ದೊಡ್ಡ ಕಟೌಟ್ ಫೋಟೊ! ಆದರೆ ಕುಣಿಗಲ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಬಿ. ರಾಮಸ್ವಾಮಿ ಗೌಡ ಅವರು ಮಾತ್ರ ಇಂಥ ಹಾದಿಯನ್ನು ಹಿಡಿದಿಲ್ಲ. ಹೊಸ ವರ್ಷವಾದ 2011ರ ಕ್ಯಾಲೆಂಡರಿನ ಪ್ರತಿಯೊಂದು ಪುಟವನ್ನು ಸಾಮಾಜಿಕ ಕಳಕಳಿಯ ಸಂದೇಶಗಳಿಂದ ಅಲಂಕರಿಸಿದ್ದಾರೆ.

ಜನರಿಗೆ ಒಳಿತಾಗುವಂಥ ಸಂದೇಶಗಳನ್ನು ಮಾತ್ರ ಕ್ಯಾಲೆಂಡರ್ ಪುಟಗಳಲ್ಲಿ ಸಚಿತ್ರವಾಗಿ ವಿನ್ಯಾಸಗೊಳಿಸುವ ಮೂಲಕ ಅವುಗಳಿಗೆ ಆಕರ್ಷಕ ಚಿತ್ರಗಳ ಪ್ರಭಾವಳಿಯನ್ನೂ ನೀಡಲಾಗಿದೆ. "ಜನರು ಕ್ಯಾಲೆಂಡರ್ ಅನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು; ಹಾಗೆ ಇರಬೇಕು. ಜೊತೆಗೆ ಕ್ಯಾಲೆಂಡರ್ ಮಾಧ್ಯಮದಿಂದ ಒಂದಿಷ್ಟು ಒಳ್ಳೆಯ ಸಂದೇಶವನ್ನೂ ನೀಡಬೇಕು" ಎಂದು ಹೇಳುವ ಬಿ.ಬಿ.ರಾಮಸ್ವಾಮಿ ಗೌಡ ಅವರು ಅದಕ್ಕೆ ತಕ್ಕಹಾಗೆಯೇ ಕ್ಯಾಲೆಂಡರ್ ಅನ್ನು ಪ್ರಕಟಿಸಿದ್ದಾರೆ.

ಸಾಮಾಜಿಕ ಕಳಕಳಿಯ ಸಂದೇಶಗಳನ್ನು ಆಕರ್ಷಕ ವಿನ್ಯಾಸದೊಂದಿಗೆ ಕ್ಯಾಲೆಂಡರಿನಲ್ಲಿ ಅಳವಡಿಸಿರುವುದು ವಿಶೇಷ. ರಕ್ತದಾನ, ನೇತ್ರದಾನದ ಮಹತ್ವ ಸಾರುವ ವಾಕ್ಯಗಳು ಕ್ಯಾಲೆಂಡರಿನಲ್ಲಿ ಗಮನ ಸೆಳೆಯುತ್ತವೆ. ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆಯ ಮಹತ್ವವನ್ನು ಸಾರುವ ಸಾಲುಗಳೂ ಸಚಿತ್ರವಾಗಿ ಕಾಣಿಸಿವೆ. ಮದ್ಯಪಾನ, ಧೂಮಪಾನ ಹಾಗೂ ಗುಟಕಾ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ ಎನ್ನುವ ಸಂದೇಶವೂ ಮನತಟ್ಟುವಂತೆ ಕ್ಯಾಲೆಂಡರಿನಲ್ಲಿ ಮೂಡಿದೆ. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವುದಕ್ಕೆ ಒತ್ತು ನೀಡುವ ಜೊತೆಗೆ ಬಾಲಕಾರ್ಮಿಕ ಶೋಷಣೆ ತಡೆಗೂ ಧ್ವನಿ ಎತ್ತಲಾಗಿದೆ. ಇನ್ನೊಂದು ವಿಶೇಷವೆಂದರೆ ಈ ಕ್ಯಾಲೆಂಡರಿನಲ್ಲಿ ಕೌಟುಂಬಿಕ ದೌರ್ಜನ್ಯ ತಡೆಗೆ ಎಚ್ಚರಿಕೆಯ ಕರೆಗಂಟೆ ರಿಂಗಣಿಸುವ ಸಂದೇಶವೂ ಇದೆ.

ಶಾಸ್ತ್ರಕ್ಕೆ ಎನ್ನುವಂತೆ ತಿಂಗಳುಗಳನ್ನು ಜೋಡಿಸಿಟ್ಟು ತಮ್ಮದೇ ದೊಡ್ಡ ಛಾಯಾಚಿತ್ರವನ್ನು ದೊಡ್ಡದಾಗಿ ಅಲಂಕರಿಸಲು ಒಪ್ಪದ ರಾಮಸ್ವಾಮಿ ಗೌಡರು ತಮ್ಮ ಹೆಸರು ಜೊತೆಗೊಂಡು ಸಣ್ಣ ಚಿತ್ರ ಮಾತ್ರ ಕ್ಯಾಲೆಂಡರಿನಲ್ಲಿ ಇರುವಂತೆ ನೋಡಿಕೊಂಡಿದ್ದಾರೆ ಈ ಚಿತ್ರಗಳಲ್ಲಿ ಕೆಲವಂತೂ ಪ್ರಾಣಿದಯೆಯನ್ನು ಎತ್ತಿ ತೋರಿಸುವಂಥವು. ಪ್ರತಿಯೊಂದು ಪುಟದ ಹೆಚ್ಚಿನ ಸ್ಥಳದಲ್ಲಿ ದಿನಾಂಕಗಳು ಎದ್ದು ಕಾಣುವಂತೆ ಮಾಡುವ ಜೊತೆಗೆ ಪ್ರತಿ ತಿಂಗಳ ಮಹತ್ವದ ದಿನಗಳ ಪಟ್ಟಿಯನ್ನೂ ನೀಡುವುದಕ್ಕೆ ಆದ್ಯತೆ ನೀಡಿರುವುದು ವಿಶೇಷ.

ಇಂಥದೊಂದು ವಿಶಿಷ್ಟವಾದ ಕ್ಯಾಲೆಂಡರ್ ಅನ್ನು ಸಾವಿರಾರು ಸಂಖ್ಯೆಯಲ್ಲಿ ಮುದ್ರಿಸಿ ಜನರಿಗೆ ತಲುಪಿಸುವ ವ್ಯವಸ್ಥೆಯನ್ನು ಬಿ.ಬಿ. ರಾಮಸ್ವಾಮಿ ಗೌಡ ಅವರು ಮಾಡಿದ್ದಾರೆ. ನಿಮಗೂ ಇದರ ಉಚಿತ ಪ್ರತಿ ಬೇಕಿದ್ದರೆ ಶಾಸಕರ ಆಪ್ತ ಸಲಹೆಗಾರರಾದ ಕೆ.ಆರ್. ಸುದರ್ಶನ್ ಬಾಬು (ಮೊಬೈಲ್: 9845977181 ಅಥವಾ 9986790221) ಅವರನ್ನು ಸಂಪರ್ಕಿಸಬಹುದು. ಇಲ್ಲವೆ ಇ-ಮೇಲ್ ವಿಳಾಸ bbramaswamygowda@gmail.com ಕ್ಕೆ ಸಂದೇಶ ಕಳುಹಿಸಬೇಕಾಗಿ ಕೋರಿಕೆ.


ಧನ್ಯವಾದಗಳು
ಕೆ.ಆರ್. ಸುದರ್ಶನ್ ಬಾಬು
ಶಾಸಕರ ಆಪ್ತ ಸಲಹೆಗಾರರು