ಅಮೇರಿಕ ವಿದ್ಯಾರ್ಥಿಗಳ ಸಂವಹನ


ಕುಣಿಗಲ್ ಶಾಸಕರಾದ ಬಿ.ಬಿ.ರಾಮಸ್ವಾಮಿ ಗೌಡ ಅವರನ್ನು ಭೇಟಿಯಾಗಿ ರಾಜಕೀಯ ವಿಷಯವಾಗಿ ಚರ್ಚೆ ನಡೆಸಿದ ಅಮೆರಿಕಾದ ವಿದ್ಯಾರ್ಥಿನಿಯರಾದ ಜೆಸ್ಸಿಕಾ, ಫಿಬಿ, ರಿಯಾನ್ ಹಾಗೂ ಎಮಿಲಿ.

ಅಮೆರಿಕದಿಂದ ಬಂದ ವಿದ್ಯಾರ್ಥಿಗಳು ಇವರು. ಭಾರತದ ಸಂಸ್ಕೃತಿ, ಕಲೆ, ಪ್ರಗತಿ, ರಾಜಕೀಯ... ಹೀಗೆ ಈ ದೇಶದ ಎಲ್ಲ ಮಗ್ಗಲುಗಳನ್ನು ಅರಿತುಕೊಳ್ಳುವುದು ಇವರ ಅಧ್ಯಯನದ ಉದ್ದೇಶ. ಸುಮಾರು ಮೂರು ವರ್ಷಗಳ ಅಧ್ಯಯನದ ಅವಧಿಯಲ್ಲಿ ಭಾರತವನ್ನು ಪುಸ್ತಕಗಳಲ್ಲಿ ಓದಿ ತಿಳಿಯುವ ಜೊತೆಗೆ, ದೇಶವನ್ನು ಸುತ್ತಿ ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ.

ದೇಶದ ಮೂಲೆ ಮೂಲೆಯನ್ನು ಸುತ್ತಾಡಿ "ಸ್ವತಂತ್ರ ಅಧ್ಯಯನ" (ಇಂಡಿಪೆಂಡೆಂಟ್ ಸ್ಟಡಿ) ಕೂಡ ಮಾಡಿ ಮುಗಿಸಿದ್ದಾರೆ. ಈ ಹಂತದಲ್ಲಿ ದೇಶದ ವಿವಿಧ ವರ್ಗದ ಜನರೊಂದಿಗೆ ಸಂಪರ್ಕ ಹೊಂದಿ ಅವರೊಂದಿಗೆ ಮಾತನಾಡಿ ಭಾರತವೇನು ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದಾರೆ. ಸಾದು ಸಂತರಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರನ್ನೂ ಭೇಟಿಯಾಗಿದ್ದೂ ಆಗಿದೆ. ಆದರೂ ಈ ಅಧ್ಯಯನವು ಪೂರ್ಣವಾಗಬೇಕೆಂದರೆ, ದೇಶದ ರಾಜಕಾರಣಿಗಳನ್ನು ಕೂಡ ಅರ್ಥ ಮಾಡಿಕೊಳ್ಳಬೇಕು. ಆಗಲೇ ಈ ದೇಶದಲ್ಲಿನ ಶಿಕ್ಷಣ ಪೂರ್ಣ ಹಾಗೂ ಅರ್ಥವತ್ತು ಎನಿಸುತ್ತದೆ.

ಇದೇ ಉದ್ದೇಶದಿಂದ ಅಮೆರಿಕದ ಈ ವಿದ್ಯಾರ್ಥಿಗಳು ರಾಜಕಾರಣಿಯೊಬ್ಬರ ಬದುಕನ್ನು ಹತ್ತಿರದಿಂದ ನೋಡಬೇಕೆಂದು ಬಯಸಿದರು. ಅದಕ್ಕಾಗಿ ಸೂಕ್ತ ರಾಜಕಾರಣಿಗಾಗಿ ಅಂತರ್ ಜಾಲದಲ್ಲಿ ಹುಡುಕಾಟ ನಡೆಸಿದರು. ಆಗ ಕಣ್ಣಿಗೆ ಬಿದ್ದಿದ್ದು ಕುಣಿಗಲ್ ಶಾಸಕರಾದ ಬಿ.ಬಿ.ರಾಮಸ್ವಾಮಿ ಗೌಡ ಅವರ ಬ್ಲಾಗ್. ಆಗಲೇ ಇದೇ ರಾಜಕಾರಣಿಯೊಂದಿಗೆ ಸಂವಹನ ನಡೆಸಿ, ರಾಜಕೀಯ ಪರಿಸ್ಥಿತಿ ಹಾಗೂ ರಾಜಕಾರಣಿಗಳ ಬದುಕು ಅರಿಯುವ ನಿರ್ಧಾರ ಮಾಡಿದರು.

ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಕಂಡು ದೇಶದ ರಾಜಕಾರಣಿಗಳ ಬಗ್ಗೆ ಮೂಡಿಸಿಕೊಂಡ ಪೂರ್ವಾಗ್ರಹ ಎಷ್ಟರ ಮಟ್ಟಿಗೆ ಸತ್ಯ-ಸುಳ್ಳು ಎನ್ನುವುದನ್ನು ನಿಖರವಾಗಿ ಅರಿಯುವುದು ಅವರ ಉದ್ದೇಶ. ಆ ನಿಟ್ಟಿನಲ್ಲಿ ಕುಣಿಗಲ್ ಶಾಸಕರಾದ ಬಿ.ಬಿ.ರಾಮಸ್ವಾಮಿ ಗೌಡ ಅವರ ಭೇಟಿಯು ಅರ್ಥವತ್ತು ಎನಿಸಿತು. ಒಮ್ಮೆ ಚುನಾಯಿತರಾದ ಈ ದೇಶದ ಜನಪ್ರತಿನಿಧಿಗಳು ಮತ್ತೆ ಜನರ ಕೈನಿಲುಕಿಗೆ ಸಿಗುವುದು ಮತ್ತೊಮ್ಮೆ ಚುನಾವಣೆ ಬಂದಾಗಲೇ ಎನ್ನುವ ಅಭಿಪ್ರಾಯವೂ ಅಮೆರಿಕದ ಈ ವಿದ್ಯಾರ್ಥಿಗಳ ಮನದಿಂದ ಮಾಯವಾಯಿತು. ರಾಮಸ್ವಾಮಿ ಗೌಡ ಅವರು ಕುಣಿಗಲ್ ನಲ್ಲಿ ಇರುವ "ನಮ್ಮ ಮನೆ" (ರಾಮಸ್ವಾಮಿ ಗೌಡ ಅವರ ಕಚೇರಿ)ಯಲ್ಲಿ ವಾರದಲ್ಲಿ ಆರು ದಿನವೂ ಜನರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ಮಾಡುವ ರೀತಿಯನ್ನು ಕಂಡು ಬೆರಗಾಗಿದ್ದಾರೆ. ಭಾರತದಲ್ಲಿ ರಾಜಕಾರಣಿ ಹೀಗೆ ಸಾಮಾನ್ಯರಿಗೆ ಹತ್ತಿರವಾಗಿರಲು ಸಾಧ್ಯವೆಂದು ಅಚ್ಚರಿಯಿಂದ ನೋಡಿದ್ದಾರೆ.

ಬಿ.ಬಿ.ರಾಮಸ್ವಾಮಿ ಗೌಡ ಅವರ ಜೊತೆಗಿನ ಸಂವಹನದ ಫಲವಾಗಿ ನಾಡಿನ ಎಲ್ಲ ರಾಜಕಾರಣಿಗಳು ಒಂದೇ ಎಂದು ಅಮೆರಿಕದ ವಿದ್ಯಾರ್ಥಿಗಳು ಹೊಂದಿದ್ದ "ಪೂರ್ವಾಗ್ರಹ"ವೂ ಬದಲಾಗಿದೆ. ರಾಜಕಾರಣಿಗಳಲ್ಲಿ ಕೆಲವರಾದರೂ ಹೀಗೆ ಜನರಿಗೆ ಹತ್ತಿರವಾಗಿ ಇರುತ್ತಾರೆ ಭಾರತದಲ್ಲಿ ಎಂದು ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡಿದ್ದಾರೆ. ರಾಜಕಾರಣಿಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಅವರು ಬದಲಿಸಿಕೊಂಡು ಅಮೆರಿಕಕ್ಕೆ ಹಿಂದಿರುಗಿ ಹೋಗುತ್ತಿದ್ದಾರೆ.

ಭಾರತದಲ್ಲಿನ ಶಿಕ್ಷಣದ ಕೊನೆಯ ಹಂತದಲ್ಲಿರುವ ಈ ಅಮೆರಿಕದ ವಿದ್ಯಾರ್ಥಿಗಳಿಗೆ ಈಗ ಸಾರ್ಥಕ್ಯ ಭಾವ. ದೇಶದ ರಾಜಕಾರಣಿಯನ್ನು ಕೂಡ ಭೇಟಿಯಾಗುವುದರೊಂದಿಗೆ ಭಾರತದ ಎಲ್ಲ ವರ್ಗದವರೊಂದಿಗೆ ಸಂವಹನ ನಡೆಸಿದ ಸಂತೃಪ್ತಿಯನ್ನು ಈ ಅಮೆರಿಕದ ವಿದ್ಯಾರ್ಥಿಗಳು ಹೊಂದಿದ್ದಾರೆ. ಕುಣಿಗಲ್ ಶಾಸಕರಾದ ಬಿ.ಬಿ.ರಾಮಸ್ವಾಮಿ ಗೌಡ ಅವರ ಜೊತೆಗಿನ ಸಂವಹನದೊಂದಿಗೆ ಅವರ ಶಿಕ್ಷಣವೂ ಪರಿಪೂರ್ಣವಾಗಿದೆ.