ರಾಜ್ಯ ಸರ್ಕಾರಕ್ಕೆ "ಜಾಣಕಿವುಡು"

ನನ್ನ ಜನರಿಗೆ ಇನ್ನಷ್ಟು... ಮತ್ತಷ್ಟು...

ಸೌಲಭ್ಯ ಒದಗಿಸುವ ಪ್ರಯತ್ನ

ಕುಣಿಗಲ್ ತಾಲೂಕಿನಿಂದ ವಿಧಾನಸಭಾ ಸದಸ್ಯನಾಗಿ ಆಯ್ಕೆಯಾದಾಗಿನಿಂದಲೂ ನನ್ನ ತುಡಿತ ಹಾಗೂ ಎದೆಯ ಬಡಿತ ಒಂದೇ ಆಗಿದೆ; ನನ್ನ ಜನರಿಗೆ ಇನ್ನಷ್ಟು... ಮತ್ತಷ್ಟು ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎನ್ನುವುದು.

ಕುಣಿಗಲ್ ತಾಲೂಕು ಕರ್ನಾಟಕ ರಾಜ್ಯಕ್ಕೆ ಮಾತ್ರವಲ್ಲ ರಾಷ್ಟ್ರಕ್ಕೆ ಮಾದರಿ ತಾಲೂಕು ಆಗಬೇಕು. ಇದು ನನ್ನ ಕನಸು. ಈಗಾಗಲೇ ಆ ನಿಟ್ಟಿನಲ್ಲಿ ನನ್ನ ಪ್ರಯತ್ನವನ್ನು ನಡೆಸಿದ್ದೇನೆ. ಒಂದಿಷ್ಟು ಕೆಲಸವೂ ಆಗಿದೆ. ಆದರೆ ಅಷ್ಟು ಸಾಕಾಗದು; ಆಗಬೇಕಾಗಿದ್ದು ಇನ್ನೂ ಸಾಕಷ್ಟಿದೆ. ಅದಕ್ಕಾಗಿ ನಿತ್ಯ ಪ್ರಯತ್ನ ಸಾಗಿದೆ.

ನನ್ನ ಮೇಲೆ ವಿಶ್ವಾಸವಿಟ್ಟು ಮತ ಕೊಟ್ಟು ವಿಧಾನಸಭಾ ಸದಸ್ಯನನ್ನಾಗಿ ಮಾಡಿದ ನನ್ನ ಜನರಿಗೆ ಪ್ರತಿಯಾಗಿ ದೊಡ್ಡ ಕೊಡುಗೆ ಕೊಡಬೇಕು. ಆ ದೊಡ್ಡ ಕೊಡುಗೆಯೆಂದರೆ ಅಭಿವೃದ್ಧಿ ಮಾತ್ರ. ಹಿಂದೆ ಅನೇಕ ಬಾರಿ ಹೇಳಿದಂತೆ ನನ್ನದು "ಅಭಿವೃದ್ಧಿಪರ ರಾಜಕೀಯ". ನನ್ನ ತಾಲೂಕು ಅಭಿವೃದ್ಧಿ ಆಗಬೇಕು, ಜನರಿಗೆ ಉತ್ತಮ ಸೌಲಭ್ಯಗಳು ಸಿಗಬೇಕು. ಇದೇ ನನ್ನ ಹೃದಯ ಮಿಡಿತ.

ಕುಣಿಗಲ್ "ಸ್ಟಡ್ ಫಾರ್ಮ್"(ಕುದುರೆಗಳ ಸಾಕಾಣಿಕೆ ಕೇಂದ್ರ)ಗೆ ಬಂದಿದ್ದ ಆಪತ್ತನ್ನು ತಪ್ಪಿಸಿದ್ದು, ರೈಲು ಮಾರ್ಗವು ಐತಿಹಾಸಿಕ ಸ್ಟಡ್ ಫಾರ್ಮ್ ಗೆ ಅಪಾಯಕಾರಿ ಆಗದಂತೆ ದೂರಕ್ಕೆ ಕಳುಹಿಸಿದ್ದು, ಕುಣಿಗಲ್ ನಗರ ಸಮೀಪದ ದೊಡ್ಡ ಕೆರೆಯಲ್ಲಿ ವರ್ಷ ಪೂರ್ತಿ ನೀರು ಇರುವುದಕ್ಕೆ ಹರಿವಿನ ಮಾರ್ಗ ರೂಪಿಸಿದ್ದು, ಮುಖ್ಯ ರಸ್ತೆ ಅಗಲೀಕರಣ ಮಾಡಿಸಿದ್ದು... ಹೀಗೆ ಇಲ್ಲಿಯವರೆಗೆ ಆಗಿರುವ ದೊಡ್ಡ ಕೆಲಸಗಳ ಪಟ್ಟಿಯನ್ನೂ ದೊಡ್ಡದಾಗಿ ಮಾಡಬಹುದು.

ಆದರೂ ನನಗೆ ತೃಪ್ತಿ ಇಲ್ಲ. ತಾಲೂಕಿಗೆ ಇನ್ನೂ ಅನೇಕ ಸೌಲಭ್ಯಗಳು ಸಿಗುವಂತೆ ಮಾಡಬೇಕು ಎನ್ನುವ ಹಸಿವು ಹಾಗೆಯೇ ಇದೆ. ಅದಕ್ಕಾಗಿ ರಾಜ್ಯ ಸರ್ಕಾರಕ್ಕೆ ಅನೇಕ ಯೋಜನೆಗಳ ಕುರಿತು ಕೋರಿಕೆ ಸಲ್ಲಿಸಿ ಮನವಿಗಳ ಕಂತೆಗಳನ್ನೇ ಕಳುಹಿಸಿಕೊಟ್ಟಿದ್ದಾಗಿದೆ. ಆದರೆ ಏನು ಮಾಡುವುದು? ಅಲ್ಲಿರುವುದು ನಮ್ಮ ಕಾಂಗ್ರೆಸ್ ಸರ್ಕಾರ ಅಲ್ಲ. ಆದ್ದರಿಂದ ಕಾಂಗ್ರೆಸ್ ಶಾಸಕನಾದ ನನ್ನ ತಾಲೂಕಿಗೆ ಯೋಜನೆಗಳನ್ನು ಮಂಜೂರು ಮಾಡುವಲ್ಲಿ ರಾಜ್ಯ ಸರ್ಕಾರವು ವಿಳಂಬ ನೀತಿಯನ್ನು ಅನುಸರಿಸಿಕೊಂಡು ಸಾಗಿದೆ.

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ ಅನೇಕ ಸಭೆಗಳಲ್ಲಿ ನನ್ನ ತಾಲೂಕಿನಲ್ಲಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ಕೋರಿಕೊಂಡಿದ್ದಾಗಿದೆ, ಒತ್ತಾಯಿಸಿದ್ದಾಗಿದೆ, ಗಟ್ಟಿಯಾದ ಧ್ವನಿಯಲ್ಲಿ ಕೂಗಿ ಹೇಳಿದ್ದಾಗಿದೆ. ಆದರೂ ಅದೇಕೋ ಇನ್ನೂ ರಾಜ್ಯ ಸರ್ಕಾರ ಕಿವಿ ಮುಚ್ಚಿಕೊಂಡಿದೆ.

ತಾಲೂಕಿಗೆ ಆಗಬೇಕಾದ ಕೆಲಸಗಳಿಗಾಗಿ ಒತ್ತಾಯಿಸಿ ಜನರನ್ನು ಸೇರಿಸಿಕೊಂಡು ಪ್ರತಿಭಟನೆ ಮಾಡುವುದು; ಜನರಿಗೆ ಅನಗತ್ಯವಾಗಿ ತೊಂದರೆ ಕೊಡುವುದು ನನಗೆ ಇಷ್ಟವಿಲ್ಲ. ಅದಕ್ಕೆ ಕಾರಣವೂ ಇದೆ; ಈಗ ಹೋರಾಡಬೇಕಾಗಿರುವುದು ಜನರಲ್ಲ. ಅವರು ತಮ್ಮ ಪ್ರತಿನಿಧಿಯಾಗಿ ಆಯ್ಕೆಮಾಡಿ ಕಳುಹಿಸಿರುವಂಥ ನಾನು. ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಅವರ ಕೋರಿಕೆಗಳನ್ನು ರಾಜ್ಯ ಸರ್ಕಾರಕ್ಕೆ ತಲುಪಿಸಿ, ಆ ಎಲ್ಲ ಕೋರಿಕೆಗಳು ಈಡೇರುವಂತೆ ಮಾಡುವುದು ನನ್ನ ಹೊಣೆ.

ಅದಕ್ಕಾಗಿಯೇ ನಾನೆಂದೂ ಜನರನ್ನು ಗುಂಪು ಕಟ್ಟಿಕೊಂಡು ಪ್ರತಿಭಟನೆ ಮಾಡುವ ಹಾಗೂ ಪ್ರಚಾರ ಪಡೆಯುವ ದುಸ್ಸಾಹಸ ಮಾಡಿಲ್ಲ. ಜನರು ನನ್ನ ಜೊತೆಗೆ ನಿಂತು ಧ್ವನಿಗೂಡಿಸಬೇಕು ಎನ್ನುವ ಅನಿವಾರ್ಯತೆ ಬಂದಾಗ ಹಾಗೆ ಮಾಡಿದರೆ ಅದಕ್ಕೊಂದು ಅರ್ಥವೂ ಇರುತ್ತದೆ. ಅದನ್ನು ಬಿಟ್ಟು ಕೇವಲ ಪ್ರಚಾರಕ್ಕಾಗಿ ಪ್ರತಿಭಟನೆ ಮಾಡಿ, ಜನರಿಗೂ ಅನಗತ್ಯವಾಗಿ ತೊಂದರೆ ನೀಡುವುದು ಸರಿಯೂ ಅಲ್ಲ. ಯಾವುದೇ ಪರಿಸ್ಥಿತಿ ಇರಲಿ; ನೇರವಾಗಿ ಸಂಬಂಧಿಸಿದವರ ಕಡೆಗೆ ಹೋಗಿ ಕೋರಿಕೆ, ಬೇಡಿಕೆ, ಒತ್ತಾಯ, ಪ್ರತಿಭಟನೆ ಮಾಡುವುದು ನನ್ನೊಬ್ಬನ ಜವಾಬ್ದಾರಿ. ನಾನು ಮಾಡುತ್ತಿರುವುದೂ ಅದನ್ನೇ. ರಾಜ್ಯ ಸರ್ಕಾರದ ಜೊತೆಗೆ ನಮ್ಮ ಜನರ ಬೇಡಿಕೆ ಈಡೇರಿಸುವಂತೆ ಸದಾ ಹೋರಾಟ ನಡೆಸಿದ್ದೇನೆ.

ಆದರೆ ರಾಜ್ಯ ಸರ್ಕಾರಕ್ಕೆ ಜಾಣ ಕಿವುಡು. ತಮ್ಮ ಪಕ್ಷದವರಲ್ಲದ ಶಾಸಕರು ಇರುವ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಯ ವಿಷಯವನ್ನು ರಾಜ್ಯ ಸರ್ಕಾರವು ನಿರ್ಲಕ್ಷಿಸುತ್ತಿದೆ. ಮಾಡುವುದಾಗಿ ಹೇಳಿದ ಕೆಲಸಗಳನ್ನು ಮಾಡುವಲ್ಲಿಯೂ ವಿಳಂಬ ನೀತಿ ಅನುಸರಿಸುತ್ತಿದೆ. ಈ ರೀತಿಯಲ್ಲಿ ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಲ್ಲಿ ಏನೂ ಕೆಲಸವೇ ಆಗುತ್ತಿಲ್ಲ ಎನ್ನುವ ಭಾವನೆಯನ್ನು ಜನರ ಮನದಲ್ಲಿ ಮೂಡಿಸುವ ಪ್ರಯತ್ನ ನಡೆಸಿದೆ.

ಏನೇ ಆಗಲಿ; ನಾನಂತೂ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ನನ್ನ ತಾಲೂಕಿನ ಜನರಿಗೆ ಹೆಚ್ಚು ಹೆಚ್ಚು ಸೌಲಭ್ಯಗಳು ಸಿಗುವಂತೆ ಮಾಡಲು ನಿತ್ಯ ಹೋರಾಟ ಮಾಡುತ್ತೇನೆ. ಎಲ್ಲಿಯವರೆಗೆ ರಾಜ್ಯ ಸರ್ಕಾರ ನನ್ನ ಹಾಗೂ ನನ್ನ ಜನರ ಕೋರಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಬಗ್ಗುವುದಿಲ್ಲವೆಂದು ನೋಡುತ್ತೇನೆ.

ತಾಲೂಕಿನಲ್ಲಿ ಶಾಲೆಗಳ ಸಂಖ್ಯೆ ಇನ್ನಷ್ಟು ಹೆಚ್ಚಬೇಕು, ತಾಲೂಕಿನಲ್ಲಿ ಈಗ ಇರುವ ಸರ್ಕಾರಿ ಶಾಲೆಗಳಿಗೆ ಅಗತ್ಯ ಇರುವಷ್ಟು ಶಿಕ್ಷಕರನ್ನು ಹೊಸದಾಗಿ ನೇಮಕ ಮಾಡಬೇಕು, ನೀರಿನ ಕೊರತೆ ಇರುವಂಥ ತಾಲೂಕಿನ ಕೆಲವು ಪ್ರದೇಶಗಳಿಗೆ ನೀರು ಸರಬರಾಜು ಮಾಡುವುದಕ್ಕೆ ಯೋಜನೆ ರೂಪಿಸಬೇಕು, ರಸ್ತೆಗಳ ಅಭಿವೃದ್ಧಿ ಆಗಬೇಕು, ಸಾರಿಗೆ ವ್ಯವಸ್ಥೆ ಹೆಚ್ಚಿಸಬೇಕು... ಹೀಗೆ ಹತ್ತಾರು ಮೂಲ ಅಗತ್ಯಗಳ ಕಡೆಗೆ ರಾಜ್ಯ ಸರ್ಕಾರ ಗಮನ ನೀಡಿದರೆ ಒಳಿತು. ಈ ಕೋರಿಕೆಗಳನ್ನು ಕಿವಿಯ ಮೇಲೆ ಹಾಕಿಕೊಳ್ಳದೆಯೇ, ಇನ್ನಷ್ಟು ಕಾಲ ಜಾಣ ಕಿವುಡನಾಗಿ ಇರುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡದಿರುವುದೇ ಒಳಿತು!