ಹೆತ್ತಮ್ಮನನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ...!

ಸುಳ್ಳು ಸುದ್ದಿ ಹರಡಿದವರಿಗೊಂದು ದಿಟ್ಟ ಉತ್ತರ

ರಾಜಕೀ ಕ್ಷೇತ್ರದಲ್ಲಿ ನಾನು ಕೂಸಾಗಿ ಕಣ್ಣು ಬಿಟ್ಟಿದ್ದೇ ಕಾಂಗ್ರೆಸ್ ಪಕ್ಷದಲ್ಲಿ. ಆದ್ದರಿಂದ ಈ ಪಕ್ಷವೇ ನನ್ನ ಹೆತ್ತಮ್ಮ. ಹೋರಾಟದ ಹಾದಿಯಲ್ಲಿ ನಡೆಯುವುದನ್ನು ಕಲಿಸಿದ ಹಾಗೂ ಜನಸೇವೆಗಾಗಿ ಯೋಚನೆ ಮಾಡುವ ಮತ್ತು ದುಡಿಯುವ ಪಾಠವನ್ನು ಕಲಿಸಿದ ಮೊದಲ ಗುರುವೂ ಹೌದು. ಸೋಲಿನ ಕಹಿಯನ್ನು ಉಂಡಾಗ ಸಾಂತ್ವನ ಹೇಳಿದ ಹಾಗೂ ಗೆದ್ದು ಸಂಭ್ರಮಿಸಿದಾಗ ಜನರ ಹಿತಕ್ಕಾಗಿ ಸ್ಪಂದಿಸುವಂತೆ ಸರಿಯಾದ ದಾರಿ ತೋರಿಸಿದ ಈ ಮಹಾತಾಯಿಯನ್ನು ಎಂದೂ ಬಿಟ್ಟು ಹೋಗಲು ಸಾಧ್ಯವಿಲ್ಲ. ನಾನು ಹಾಗೆ ಮಾಡುತ್ತೇನೆ ಎಂದು ಸುಳ್ಳು ಸುದ್ದಿ ಹರಡಿದ ಎಲ್ಲರಿಗೂ ಇದೇ ನಾನು ನೀಡುವ ದಿಟ್ಟ ಉತ್ತರ.


ಬಿ.ಬಿ.ರಾಮಸ್ವಾಮಿ ಗೌಡ
ಶಾಸಕರು, ಕುಣಿಗಲ್ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ ತೊರೆಯುತ್ತಿದ್ದಾರೆ ಬಿ.ಬಿ.ರಾಮಸ್ವಾಮಿ ಗೌಡರು ಅಂತಾ ಸುದ್ದಿ ಚಾನಲ್ಲೊಂದರಲ್ಲಿ ಬರುತ್ತಿದೆ ನೋಡಿ ಸರ್ ಅಂತಾ ಫೋನ್ ಮಾಡಿ ಹೇಳಿದರು ನನ್ನ ಆತ್ಮೀಯರೊಬ್ಬರು. ನನಗೆ ಅಚ್ಚರಿ! ಸುಮಾರು ಒಂದು ವಾರದ ಕಾಲ ನಾನು ನವದೆಹಲಿಯಲ್ಲಿ ಇದ್ದಾಗ ಇಂಥದೊಂದು ಸುಳ್ಳು ಸುದ್ದಿಯು ಕರ್ನಾಟಕದಲ್ಲಿ ಹರಡಿಕೊಂಡಿತ್ತು. ಅದು ನನಗೆ ಹಾಸ್ಯಾಸ್ಪದ ಸುದ್ದಿ ಎಂದು ಕೂಡ ಅನಿಸಿತು. ಅದಾವ ವರದಿಗಾರ ಮಹಾಶಯ ಹೀಗೆ ವರದಿ ಮಾಡಿದ್ದಾನೆ ಎಂದುಕೊಂಡು ಮೊದಲು ಮರುಕಪಟ್ಟಿದ್ದು ಆ ವರದಿಗಾರನ ಬಗ್ಗೆ. ಸರಿಯಾದ ಹಾಗೂ ನಂಬಲರ್ಹವಾದ ಸುದ್ದಿ ಮೂಲವೂ ಇಲ್ಲದೇ ಹೀಗೆ ವರದಿ ಮಾಡಿದ ಪತ್ರಕರ್ತನ ಬಗ್ಗೆ ಮರುಕಪಟ್ಟೆ. ಅಂಥದೊಂದು ಸುದ್ದಿಯನ್ನು ಪ್ರಸಾರ ಮಾಡಿದ ಚಾನಲ್ ಅನ್ನು ದೆಹಲಿಯಲ್ಲಿ ತಂಗಿದ್ದ ಕೋಣೆಯಲ್ಲಿದ್ದ ಟೆಲಿವಿಷನ್ ಸೆಟ್ ಟಾಪ್ ಬಾಕ್ಸ್ ನಲ್ಲಿ ಜಾಲಾಡಿ ಹುಡುಕಿ ನೋಡಿದೆ. ಆ ಸುದ್ದಿಯೇ ನನಗೆ ಒಂದು "ಜೋಕ್" ಎನಿಸಿತು.

ಎತ್ತ ಸಾಗಿದೆ ಈ ಪತ್ರಿಕೋದ್ಯಮ ಹಾಗೂ ಟೆಲಿವಿಷನ್ ಮಾಧ್ಯಮ ಅಂತಾ ಕೂಡ ಬೇಸರವಾಯಿತು. ಚಾನಲ್ಲೊಂದು ಪ್ರಸಾರ ಮಾಡಿದ ಆ ಸುಳ್ಳು ಸುದ್ದಿಯ ವಿಷಯ ಹಾಳಾಗಿ ಹೋಗಲಿ; ನಾನು ಮೆಚ್ಚಿಕೊಂಡು ಓದುವ ದೊಡ್ಡ ಪತ್ರಿಕೆಯೊಂದು ಕೂಡ ಇಂಥದೊಂದು ಸುದ್ದಿಯನ್ನು ಬಾಕ್ಸ್ ಮಾಡಿ ಮೊದಲ ಪುಟದಲ್ಲಿ "ಕಾಂಗ್ರೆಸ್ ಶಾಸಕ ನಾಪತ್ತೆ...?" ಎನ್ನುವ ತಲೆಬರಹ ನೀಡಿದ್ದು ಮಾತ್ರ ಮನಸ್ಸಿಗೆ ನೋವುಂಟುಮಾಡಿತು. ನಾನು ನಂಬಿಕೊಂಡು ಅತ್ಯಂತ ವಿಶ್ವಾಸಾರ್ಹ ಸುದ್ದಿ ಪ್ರಕಟಿಸುವ ಪತ್ರಿಕೆಯೆಂದು ಭರವಸೆ ಇಟ್ಟುಕೊಂಡಿದ್ದ ಪತ್ರಿಕೆಯಲ್ಲಿಯೇ ಇಂಥದೊಂದು ಪ್ರಮಾದ ನಡೆಯಿತಲ್ಲಾ ಎಂದು ನೊಂದುಕೊಂಡೆ. ಏಕೆಂದರೆ ನಾನು ಮಾತ್ರವಲ್ಲ ನನ್ನ ತಂದೆಯ ಕಾಲದಿಂದಲೂ ಅಭಿಮಾನದಿಂದ ಓದುತ್ತಾ ಬಂದಿರುವ ಪತ್ರಿಕೆಯದು. ಅದರಲ್ಲಿಯೂ ಇಂಥದೊಂದು ತಪ್ಪು ಸುದ್ದಿ ಪ್ರಕಟವಾಗಿದ್ದು ನನಗೆ ಸಹನೀಯ ಎನಿಸಲಿಲ್ಲ. ನಾನು ಸಾಕಷ್ಟು ಬಾರಿ ಪತ್ರಿಕಾ ಪ್ರಕಟಣೆ ಕಳುಹಿಸಿ, ನನ್ನ ಪರ್ಸನಲ್ ನಂಬರ್ ಕೂಡ ಈ ಪತ್ರಿಕೆಯ ಮುಖ್ಯ ವರದಿಗಾರರಿಗೆ ಕಳುಹಿಸಿದ್ದೇನೆ. ಅವರು ಒಂದು ಬಾರಿ ನನ್ನನ್ನು ಸಂಪರ್ಕಿಸಿ ಈ ವಿಷಯವನ್ನು ಖಚಿತಮಾಡಿಕೊಳ್ಳಬಹುದಿತ್ತು; ಹಾಗೆ ಏಕೆ ಮಾಡಲಿಲ್ಲ? ಎನ್ನುವ ಪ್ರಶ್ನೆಯಂತೂ ಈಗಲೂ ನನ್ನನ್ನು ಕಾಡುತ್ತಿದೆ.

ಪತ್ರಿಕೆಯಲ್ಲಿ ಪ್ರಕಟವಾದ ಹಾಗೂ ಚಾನಲ್ ನಲ್ಲಿ ಮೂಡಿದ ನಾನು ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗುತ್ತಿದ್ದೇನೆ ಎನ್ನುವ ಸುದ್ದಿಯು ಪ್ರಸಾರವಾದ ಸಂದರ್ಭದಲ್ಲಿ ನಾನು ನವದೆಹಲಿಯಲ್ಲಿ ಇದ್ದೆ. ನನ್ನ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಮಂಜೂರಾತಿಯಿಂದ ಕೆಲವು ಕೆಲಸಗಳು ಆಗಬೇಕಿತ್ತು. ಅದಕ್ಕಾಗಿ ಬೆಳಿಗ್ಗೆಯಿಂದ ಸಂಜೆಯವರೆಗೆ ವಿವಿಧ ಕಚೇರಿಗಳಿಗೆ ಎಡತಾಕುತ್ತಿದ್ದೆ. ಆ ಕಾಲದಲ್ಲಿ ರಾಜ್ಯದಲ್ಲಿ ಆಗುತ್ತಿದ್ದ ರಾಜಕೀಯ ಬೆಳವಣಿಗೆಗಳ ಬಗ್ಗೆ ಯೋಚಿಸುವುದಕ್ಕೆ ನಾನು ಮಹತ್ವವನ್ನೂ ನೀಡಿರಲಿಲ್ಲ. ಏಕೆಂದರೆ ನನ್ನ ಮೇಲೆ ವಿಶ್ವಾಸವನ್ನಿಟ್ಟು ಆಯ್ಕೆಮಾಡಿ ಕಳುಹಿಸಿದ ನನ್ನ ಕುಣಿಗಲ್ ವಿಧಾನಸಭಾ ಕ್ಷೇತ್ರದ ಜನರ ಕೆಲಸ ನನಗೆ ಮುಖ್ಯವಾಗಿತ್ತು. ಆ ಕೆಲಸಗಳನ್ನು ಮಾಡಿಸಿಕೊಳ್ಳಲು ಬೆಳಿಗ್ಗೆಯಿಂದ ಮನವಿ ಪತ್ರವನ್ನು ಹಿಡಿದು ವಿವಿಧ ಕಚೇರಿಗಳಿಗೆ ಅಲೆಯುತ್ತಿದ್ದೆ. ಜನರಿಗಾಗಿ ಕೆಲಸ ಮಾಡುವುದು ನನಗೆ ತೃಪ್ತಿ ನೀಡುತ್ತದೆ. ಅದರ ಬದಲಿಗೆ ಕುತಂತ್ರದ ರಾಜಕೀಯ ಮಾಡಿಕೊಂಡು ಕಾಲಕಳೆಯುವುದು ನನಗೆ ಇಷ್ಟವಾಗದು.

ನನ್ನದು ಏನಿದ್ದರೂ "ಅಭಿವೃದ್ಧಿಪರ ರಾಜಕೀಯ". ಆ ನಿಟ್ಟಿನಲ್ಲಿ ಮಾತ್ರ ಗಮನವಿಟ್ಟು ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ. ಹೀಗೆ ಅಭಿವೃದ್ಧಿ ವಿಷಯವಾಗಿ ಚರ್ಚೆ ಮಾಡಲು ಕೂಡ ನಾನು ಅನೇಕ ಬಾರಿ ನಮ್ಮ ಜಿಲ್ಲೆ(ತುಮಕೂರು)ಯ ಹಿಂದಿನ ಉಸ್ತುವಾರಿ ಸಚಿವರಾಗಿದ್ದ ಎಸ್. ಸುರೇಶ್ ಕುಮಾರ್ ಅವರನ್ನು ಕೂಡ ಭೇಟಿಯಾಗಿದ್ದಿದೆ. ಆದರೆ ಅದರಲ್ಲಿ ಯಾವುದೇ ರಾಜಕೀಯವಿಲ್ಲ. ನನ್ನ ಜನರ ಕೆಲಸ ಮಾಡಿಸಿಕೊಳ್ಳಲು ಮಾತ್ರ ನಡೆದ ಭೇಟಿಗಳವು. ಆದ್ದರಿಂದ ಅದಕ್ಕೆ ಬೇರೆ ಅರ್ಥವನ್ನು ನೀಡುವ ಅಗತ್ಯವೂ ಇಲ್ಲ. ಇಂಥ ಕೆಲವು ಘಟನೆಗಳನ್ನು ಮುಂದಿಟ್ಟುಕೊಂಡು ಕೆಲವರು ಪಕ್ಷಾಂತರ ಮಾಡುತ್ತಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದು ಹಾಸ್ಯಾಸ್ಪದ. ಅಂಥ ಕುತಂತ್ರ ಮಾಡಿದವರಿಗೆ ನಾನು ಇಲ್ಲಿ ನೇರವಾಗಿ, ದಿಟ್ಟವಾಗಿ ಹಾಗೂ ನಿರಂತರವಾಗಿ ಒಂದು ಉತ್ತರವನ್ನು ನೀಡಲು ಬಯಸುತ್ತೇನೆ. ನಾನು ಹೆತ್ತಮ್ಮನನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ ಎನ್ನುವುದೇ ನನ್ನ ದಿಟ್ಟ ಉತ್ತರ!

ಕಾರ್ಯಕರ್ತರ ನಡುವೆ ಇರುವ ಹಾಗೂ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ದುಡಿಯಲು ಮಾತ್ರ ಬಯಸುವ ನಾನು ಅದಕ್ಕಾಗಿ ಎಲ್ಲ ಮಟ್ಟದಲ್ಲಿ ಪ್ರಯತ್ನ ಮಾಡುತ್ತಾ ಬಂದಿದ್ದೇನೆ. ನನ್ನ ಕ್ಷೇತ್ರವಾದ ಕುಣಿಗಲ್ ಅನ್ನು ನಿರ್ಲಕ್ಷಿಸಿಕೊಂಡು ಬಂದಿರುವ ರಾಜ್ಯ ಬಿಜೆಪಿ ಸರ್ಕಾರಕ್ಕೆ ಇಲ್ಲಿ ಆಗಬೇಕಾದ ಕಾಮಗಾರಿಗಳ ಕುರಿತು ಕೂಡ ವಿನಂತಿ ಮಾಡುತ್ತಲೇ ಇದ್ದೇನೆ. ಆದರೂ ಕಾಂಗ್ರೆಸ್ ಶಾಸಕನಾದ ನನ್ನ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರವು ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಅಷ್ಟಾಗಿ ಅಸಕ್ತಿ ತೋರುತ್ತಿಲ್ಲ. ಅದು ನನ್ನನ್ನು ಈಗಲೂ ಅಸಮಾಧಾನಗೊಳಿಸಿದೆ. ನನ್ನಿಂದ ರಾಜ್ಯ ಸರ್ಕಾರಕ್ಕೆ ಹೋಗಿರುವ ಅನೇಕ ಅರ್ಜಿಗಳು ಹಾಗೂ ಮನವಿ ಪತ್ರಗಳು ಹಾಗೂ ಆಕ್ಷೇಪಗಳು ಯಾವುದೇ ಸರಿಯಾದ ಉತ್ತರವಿಲ್ಲದೆಯೇ ಹಾಗೆಯೇ ನೆನೆಗುದಿಗೆ ಬಿದ್ದಿವೆ. ಇದಕ್ಕಾಗಿ ನಾನು ಬಿಜೆಪಿ ಸರ್ಕಾರದ ವರ್ತನೆಯನ್ನು ಆಕ್ಷೇಪಿಸುತ್ತಲೇ ಬಂದಿದ್ದೇನೆ.

ಈ ವಿಷಯವಾಗಿ ಜಿಲ್ಲಾ ಮಟ್ಟದ ಅಭಿವೃದ್ಧಿ ಪರಿಶೀಲನಾ ಸಭೆಗಳಲ್ಲಿ ಅನೇಕ ಬಾರಿ ಧ್ವನಿ ಎತ್ತಿದ್ದೇನೆ. ಜನರನ್ನು ಒಗ್ಗೂಡಿಸಿಕೊಂಡು ಬೀದಿಗಿಳಿದು ಹೋರಾಟ ಮಾಡುವ ನಾಟಕವನ್ನು ಮಾಡುವುದು ನನಗೆ ಇಷ್ಟವಿಲ್ಲ. ಶಾಂತರೀತಿಯಲ್ಲಿ ನನ್ನ ಕ್ಷೇತ್ರದ ಕೆಲಸಗಳನ್ನು ಮಾಡಿಸಿಕೊಳ್ಳಬೇಕು, ಜನರಿಗೂ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು ನನ್ನ ಆಶಯ ಹಾಗೂ ನಂಬಿಕೆ. ಆದ್ದರಿಂದ ನಾನು ಬೀದಿಗೆ ಇಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ನನ್ನ ಕ್ಷೇತ್ರದ ಜನರನ್ನು ಅನಗತ್ಯವಾಗಿ ಸಂಕಷ್ಟದಲ್ಲಿ ಸಿಲುಕಿಸುವ ದುಸ್ಸಾಹಸವನ್ನೂ ಎಂದೂ ಮಾಡಿಲ್ಲ. ಹಾಗೆಂದು ನನ್ನ ಈ ಸಭ್ಯ ವರ್ತನೆಯನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವುದೂ ಸರಿಯಲ್ಲ. ಜನರ ಪ್ರತಿನಿಧಿಯಾಗಿ ನಾನು ಅವರ ಪರವಾಗಿ ಹೋರಾಡುವುದು ನನ್ನ ಕರ್ತವ್ಯ. ಅದರ ಬದಲು ಜನರನ್ನು ಮುಂದೆ ಬಿಟ್ಟು ನಾನು ಹಿಂದೆ ಉಳಿಯುವುದು ನಾಯಕನ ಗುಣವೂ ಅಲ್ಲ. ನಮ್ಮ ಕಾಂಗ್ರೆಸ್ ಇತಿಹಾಸವು ಜನರಿಗಾಗಿ ತಾವೇ ಮುಂದೆ ನಿಂತು ಹೋರಾಟಮಾಡಿದ ದೊಡ್ಡ ನಾಯಕರನ್ನು ಹೊಂದಿದ ಪಕ್ಷ. ಅಂಥ ಮಹಾನ್ ಜನನಾಯಕರನ್ನು ಕಂಡ ಪಕ್ಷದ ಆದರ್ಶಗಳನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ. ಪಕ್ಷಾಂತರಕ್ಕೂ ನನ್ನ ಬಲವಾದ ವಿರೋಧವಿದೆ. ಪಕ್ಷಾಂತರವನ್ನು ವಿರೋಧಿಸುವ ನಾನು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬೇರೊಂದು ಪಾರ್ಟಿಗೆ ಹೋಗುತ್ತೇನೆ ಎಂದು ಕನಸಿನಲ್ಲಿಯೂ ಯಾರೂ ಯೋಚನೆ ಮಾಡುವ ಅಗತ್ಯವಿಲ್ಲ.

ಕಾಂಗ್ರೆಸ್ ನನ್ನ ಹೆತ್ತತಾಯಿ. ರಾಜಕೀಯ ಕ್ಷೇತ್ರದಲ್ಲಿ ನಾನು ಕೂಸಾಗಿ ಕಣ್ಣು ಬಿಟ್ಟಿದ್ದೇ ಕಾಂಗ್ರೆಸ್ ಪಕ್ಷದಲ್ಲಿ. ಆದ್ದರಿಂದ ಈ ಪಕ್ಷವೇ ನನ್ನ ಹೆತ್ತಮ್ಮ. ಹೋರಾಟದ ಹಾದಿಯಲ್ಲಿ ನಡೆಯುವುದನ್ನು ಕಲಿಸಿದ ಹಾಗೂ ಜನಸೇವೆಗಾಗಿ ಯೋಚನೆ ಮಾಡುವ ಮತ್ತು ದುಡಿಯುವ ಪಾಠವನ್ನು ಕಲಿಸಿದ ಮೊದಲ ಗುರುವೂ ಹೌದು. ಸೋಲಿನ ಕಹಿಯನ್ನು ಉಂಡಾಗ ಸಾಂತ್ವನ ಹೇಳಿದ ಹಾಗೂ ಗೆದ್ದು ಸಂಭ್ರಮಿಸಿದಾಗ ಜನರ ಹಿತಕ್ಕಾಗಿ ಸ್ಪಂದಿಸುವಂತೆ ಸರಿಯಾದ ದಾರಿ ತೋರಿಸಿದ ಈ ಮಹಾತಾಯಿಯನ್ನು ಎಂದೂ ಬಿಟ್ಟು ಹೋಗಲು ಸಾಧ್ಯವಿಲ್ಲ. ನಾನು ಹಾಗೆ ಮಾಡುತ್ತೇನೆ ಎಂದು ಸುಳ್ಳು ಸುದ್ದಿ ಹರಡಿದ ಎಲ್ಲರಿಗೂ ಇದೇ ನಾನು ನೀಡುವ ದಿಟ್ಟ ಉತ್ತರ. ಆದ್ದರಿಂದ ಇನ್ನು ಮುಂದಾದರೂ ನನ್ನ ಬಗ್ಗೆ ಹೀಗೆ ಸುದ್ದಿ ಪ್ರಕಟಿಸುವ ಮುನ್ನ ಪ್ರಜ್ಞಾವಂತರಾದ ಪತ್ರಕರ್ತರು ಹಾಗೂ ಮಾಧ್ಯಮ ಮಿತ್ರರು ಒಮ್ಮೆ ಯೋಚನೆ ಮಾಡಬೇಕು. ನನ್ನ ಬಗ್ಗೆ ಸಲ್ಲದ ಸುದ್ದಿಯನ್ನು ನೀಡುವ ಮೂಲಕ ಸುದ್ದಿ ಮಿತ್ರರ ದಾರಿ ತಪ್ಪಿಸಲು ಯತ್ನಿಸುವ ಸುದ್ದಿ ಮೂಲಗಳ ಬಗ್ಗೆಯೂ ವಿವೇಚನೆಯುಳ್ಳ ಪತ್ರಕರ್ತರು ಒಮ್ಮೆ ಯೋಚನೆ ಮಾಡಬೇಕೆಂದು ಕೋರುತ್ತೇನೆ.