ಮಾವುತ "ಖುದ್ದೂಸ್"ನಿಂದ "ಗಜೇಂದ್ರ" ಆನೆಯನ್ನು ದೂರಮಾಡಿದ ಅಧಿಕಾರಿಗಳು



ಅನುಭವಿ ಮಾವುತ ಖುದ್ದೂಸ್ ಅವರಿಂದ ಸುಮಾರು ಒಂದು ವರ್ಷ "ಗಜೇಂದ್ರ" ಆನೆಯನ್ನು ದಸರಾಕ್ಕಾಗಿ ಸಜ್ಜು ಮಾಡಿಸಿಕೊಂಡ ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಆನಂತರ ನಿರ್ದಯವಾಗಿ ಆನೆಯಿಂದ ಈ ಮಾವುತನನ್ನು ದೂರ ಮಾಡುವಂಥ ಕ್ರೂರತನ ಪ್ರದರ್ಶಿಸಿದ್ದಾರೆ. ಇದರಿಂದಾಗಿ ಈಗ ಮಾವುತ ಖುದ್ದೂಸ್ ನೊಂದುಕೊಂಡು ನಿತ್ಯವೂ ಕಣ್ಣೀರಿಡುತ್ತಿದ್ದಾರೆ. ಇದು ಮಾವುತನ ಸ್ಥಿತಿ; ಅದೇ ಮಾವುತನಿಂದ ದೂರವಾದ "ಗಜೇಂದ್ರ" ಆನೆಗೆಷ್ಟು ತಳಮಳ ಆಗಿದೆ ಎಂದು ಬಲ್ಲವರು ಯಾರು? ಮಾತೇನಾದರೂ ಬರುತ್ತಿದ್ದರೆ ಖಂಡಿತವಾಗಿಯೂ "ಗಜೇಂದ್ರ" ಆನೆಯು ತಾನು ಮಾವುತನಿಂದ ದೂರವಾದ ವೇದನೆಯನ್ನು ಹೇಳಿಕೊಳ್ಳುತ್ತಿತ್ತೇನೋ!?

ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಪಟ್ಟದ ಆನೆಯಾಗಿ ವಿಜೃಂಭಿಸುತ್ತಿರುವ "ಗಜೇಂದ್ರ" ಆನೆಯನ್ನು ತನ್ನ ಮಾವುತನ ಸಾಮಿಪ್ಯದಿಂದ ದೂರ ಮಾಡಲಾಗಿದೆ. ಇದಕ್ಕಿಂತ ಹೀನಾಯ ಹಾಗೂ ಹೃದಯಹೀನ ಕೃತ್ಯ ಇನ್ನೊಂದು ಇದೆಯೇ?

ದಸರಾ ಚಟುವಟಿಕೆಗಳಲ್ಲಿ ಭಾಗವಹಿಸುವ ಉದ್ದೇಶದಿಂದ ಬಿಳಿಗಿರಿರಂಗ ದೇವಸ್ಥಾನ ಅಭಯಾರಣ್ಯಕ್ಕೆ ಒಳಪಡುವ ಕೆ.ಗುಡಿ(ಕ್ಯಾತೇಶ್ವರ ಗುಡಿ)ಯಿಂದ ಮೊದಲ ತಂಡದಲ್ಲಿ ಮೈಸೂರಿಗೆ ಬಂದಿರುವ 56 ವರ್ಷ ವಯಸ್ಸಿನ "ಗಜೇಂದ್ರ" ಆನೆಯು ತನ್ನ ಮಾವುತನಾದ ಖುದ್ದೂಸ್ ಅವರಿಂದ ದೂರವಾಗಿದೆ.

ಅನುಭವಿ ಖುದ್ದೂಸ್ ಅವರು ದಸರಾ ಉದ್ದೇಶಕ್ಕಾಗಿಯೇ ಕಳೆದ ಒಂದು ವರ್ಷದಿಂದ "ಗಜೇಂದ್ರ" ಆನೆಯನ್ನು ತಯಾರಿ ಮಾಡಲು ಬೆವರು ಸುರಿಸಿದ್ದಾರೆ. ಆದರೆ ಅವರ ಶ್ರಮವನ್ನೆಲ್ಲಾ ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತೆ ಮಾಡಿರುವ ಅರಣ್ಯ ಇಲಾಖೆ ಅಧಿಕಾರಿಗಳು. ಸಲ್ಲದ ಆರೋಪವನ್ನು ಮಾಡುವ ಮೂಲಕ ವಿನಾ ಕಾರಣವಾಗಿ ಖದ್ದೂಸ್ ಅವರನ್ನು "ಗಜೇಂದ್ರ" ಆನೆಯಿಂದ ದೂರಮಾಡಿದ್ದಾರೆ.

"ಗಜೇಂದ್ರ" ಆನೆಯೊಂದಿಗೆ ಸುಮಾರು ಹನ್ನೊಂದು ತಿಂಗಳಿಂದ ಆತ್ಮೀಯತೆಯಿಂದ ಇದ್ದ ಖುದ್ದೂಸ್ ಅವರನ್ನು ದಸರಾ ಹತ್ತಿರ ಬಂದಾಗಲೇ ಅದರಿಂದ ದೂರಮಾಡಲಾಗಿದೆ. ಹಿರಿಯ ಮಾವುತರಾದ ಖುದ್ದೂಸ್ ಅವರ ಬದಲಿಗೆ ಬೇರೆಯವರನ್ನು ಈ ಆನೆಯ ಮಾವುತರನ್ನಾಗಿ ಕೊನೆಯ ಕ್ಷಣದಲ್ಲಿ ನೇಮಕ ಮಾಡಲಾಗಿದೆ. ಹೀಗೆ ಮಾಡುವ ಮೂಲಕ ವರ್ಷಪೂರ್ತಿ ಶ್ರಮಿಸಿ, ಆನೆಯನ್ನು ಸಜ್ಜುಗೊಳಿಸಿದ ಪರಿಣತ ಮಾವುತ ಖುದ್ದೂಸ್ ಅವರಿಗೆ ಅನ್ಯಾಯ ಮಾಡಲಾಗಿದೆ.

"ಗಜೇಂದ್ರ" ಆನೆಗೆ ಖುದ್ದೂಸ್ ಮಾವುತ ಆಗಿದ್ದು ಹೀಗೆ:

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ "ನಾಗರಹೊಳೆ ಆನೆ ಶಿಬಿರ"ದಿಂದ 2009ರ ಫೆಬ್ರುವರಿಯಲ್ಲಿ ಆನೆ ಸಫಾರಿಯ ಉದ್ದೇಶಕ್ಕಾಗಿಯೇ ವರ್ಗಾವಣೆಗೊಂಡ "ಗಜೇಂದ್ರ" ಆನೆಯು ಕೆ.ಗುಡಿಗೆ ಬಂದಿತ್ತು. ಈ ಆನೆಗೆ ಬಹು ವರ್ಷಗಳಿಂದ ಕಾವಾಡಿ ಆಗಿದ್ದ ಗಣಪತಿ ಎನ್ನುವವರ ಜೊತೆಯಲ್ಲಿ ಕಂಠಾಪುರ ಶಿಬಿರದ ರಾಮಾ ಎನ್ನುವ ಮಾವುತನನ್ನು ಕೂಡ ವರ್ಗ ಮಾಡಲಾಗಿತ್ತು.

2009ರ ಮೇ ತಿಂಗಳಿನಲ್ಲಿ ಕಾಡಾನೆಯನ್ನು ಹಿಡಿಯಲು ತೆರಳಿದ "ಗಜೇಂದ್ರ" ಆನೆಯು ಕೆ.ಗುಡಿ ಶಿಬಿರಕ್ಕೆ ಮರಳಿದಾಗ ಮಾವುತ ರಾಮ ಅವರ ನಿರ್ಲಕ್ಷ್ಯದಿಂದ ಶಕ್ತಿ ಕುಂದಿ ಹೋಗಿತ್ತು. ಅದೇ ಸಂದರ್ಭದಲ್ಲಿ ಮಾವುತ ರಾಮ ಅವರು ಕುಡಿದ ಮತ್ತಿನಲ್ಲಿ ಬಂದು ಕೆ.ಗುಡಿ ಆನೆ ಶಿಬಿರದಲ್ಲಿ ದಾಂದಲೆ ಮಾಡಿದ್ದರು. ಈ ಘಟನೆಗೆ ಗಾರ್ಡುಗಳು, ವಾಚರುಗಳು ಹಾಗೂ ಅದೇ ಶಿಬಿರದಲ್ಲಿನ ಮಾವುತರು ಮತ್ತು ಕಾವಾಡಿಗಳು ಅಷ್ಟೇ ಅಲ್ಲ; ಕೆ.ಗುಡಿಯಲ್ಲಿಯೇ ನೆಲೆಸಿರುವ ಕೆಲವು ಅರಣ್ಯ ಇಲಾಖೆ ಸಿಬ್ಬಂದಿಯ ಕುಟುಂಬದವರೂ ಸಾಕ್ಷಿಯಾಗಿದ್ದಾರೆ.

2009ರ ದಸರಾ ಸಂದರ್ಭದಲ್ಲಿ ಮೈಸೂರು ಅರಮನೆಯಲ್ಲಿಯೂ ತಿಂಗಳುಗಳ ಕಾಲ ಪ್ರತಿನಿತ್ಯ ಕುಡಿದ ಮತ್ತಿನಲ್ಲಿ ಇರುವ ಮೂಲಕ ಇದೇ ಮಾವುತ ರಾಮ ಅವರು ಅರಣ್ಯ ಇಲಾಖೆಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ದಸರಾ ಕಳೆದ ನಂತರ ಪುನಃ ಕೆ.ಗುಡಿಗೆ ಬಂದ "ಗಜೇಂದ್ರ" ಆನೆಗೆ ಅರಣ್ಯ ಇಲಾಖೆ ಸೂಕ್ತ ಮಾವುತ ಅಗತ್ಯವೆಂದು ಯೋಚಿಸಿದರು. ಆಗ ಆಯ್ಕೆ ಮಾಡಿದ್ದು ಅದೇ ಶಿಬಿರದಲ್ಲಿದ್ದ ಹಿರಿಯ ಮಾವುತ ಖುದ್ದೂಸ್ ಅವರನ್ನು. ಖುದ್ದೂಸ್ ಅವರನ್ನು ಈ ಹಿಂದೆ ಇದ್ದ ಮಾವುತ ರಾಮ ಅವರ ಬದಲಿಗೆ "ಗಜೇಂದ್ರ"ನನ್ನು ನೋಡಿಕೊಳ್ಳುವ ಕೆಲಸಕ್ಕೆ ನೇಮಕ ಮಾಡಲಾಯಿತು.

"ಮಸ್ತ್" ಸ್ಥಿತಿಯಲ್ಲಿದ್ದ ಗಜೇಂದ್ರ ಆನೆ ಸೇವೆ ಮಾಡಿದ ಖುದ್ದೂಸ್:

2009ರ ನವೆಂಬರ್ ತಿಂಗಳಿನಲ್ಲಿ "ಮಸ್ತ್" (ಮಸ್ತಿ) ಸ್ಥಿತಿಯಲ್ಲಿದ್ದ "ಗಜೇಂದ್ರ" ಆನೆಯ ಹೊಣೆಯನ್ನು ಖುದ್ದೂಸ್ ಅವರಿಗೆ ನೀಡಲಾಗಿತ್ತು. ಆದರೆ ಆನೆಗಳ ಬಗ್ಗೆ ಸಹಜವಾಗಿಯೇ ಮಮಕಾರ ಹೊಂದಿರುವ ಸಹೃದಯಿ ಮಾವುತ ಖುದ್ದೂಸ್ ಅವರು ಹಿಂದೇಟು ಹಾಕದೇ ಆನೆಯನ್ನು ನಿರ್ವಹಿಸುವ ಹೊಣೆಯನ್ನು ಹೊತ್ತುಕೊಂಡರು. ಅಷ್ಟೇ ಅಲ್ಲ ತಮಗೆ ವಹಿಸಿದ್ದ "ಗಜೇಂದ್ರ" ಆನೆಯನ್ನು ಸಮರ್ಥವಾಗಿಯೂ ನಿಭಾಯಿಸಿದರು.

ಸಾಮಾನ್ಯವಾಗಿ ಆನೆ ಶಿಬಿರಗಳಲ್ಲಿ "ಮಸ್ತ್" ಸ್ಥಿತಿಯಲ್ಲಿರುವ ಗಂಡಾನೆಯನ್ನು ಕಟ್ಟಿಹಾಕಿ ಮೇವು ಹಾಕಲಾಗುತ್ತದೆ. ಬೇರೆ ಗಂಡಾನೆಗಳ ಜೊತೆಯಲ್ಲಿ ಸದಾ ಕಾದಾಟಕ್ಕೆ ನಿಲ್ಲುವ ಹಾಗೂ ಹೆಣ್ಣಾನೆಗಳಿಗೆ ಆಕರ್ಷಿತವಾಗಿ ಮೈಲುಗಟ್ಟಲೆ ನಡೆಯುವ ಇಂಥ ಆನೆಯನ್ನು ಪ್ರತಿ ನಿತ್ಯವೂ ಸಹಜ ಪರಿಸರದಲ್ಲಿ ಮೇಯುವುದಕ್ಕೆ ಬಿಟ್ಟು ಕಾಳಜಿ ಮಾಡುವ ಕೆಲಸವನ್ನು ಖುದ್ದೂಸ್ ಮಾಡಿದ್ದಾರೆ. ಆನೆಯನ್ನು ಮುಕ್ತ ಪರಿಸರದಲ್ಲಿ ಬಿಟ್ಟು ಅದರ ಮನವನ್ನು ತಣಿಸುವುದು ಸಾಹಸದ ಕೆಲಸವೇ ಆಗಿದೆ. ಅಂಥ ಸಾಹಸವನ್ನು ಮಾವುತ ಖುದ್ದೂಸ್ ಅವರು ಮಾಡಿದ್ದಾರೆ.

ಅದೇ ಸಮಯದಲ್ಲಿಯೇ "ಗಜೇಂದ್ರ" ಆನೆ ಹಾಗೂ ಮಾವುತ ಖುದ್ದೂಸ್ ಅವರ ನಡುವಣ ಸಂಬಂಧವು ಬಲವಾಗಿದ್ದು. ಆನೆಯ ಜೊತೆಗೆ ಖುದ್ದೂಸ್ ಅವರು ಒಳ್ಳೆಯ ರೀತಿಯ ಸಂವಹನವನ್ನು ಸಾಧಿಸುವಲ್ಲಿಯೂ ಯಶಸ್ವಿಯಾಗಿದ್ದರು. ಮಸ್ತ್ ಸ್ಥಿತಿಯಲ್ಲಿದ್ದ "ಗಜೇಂದ್ರ" ಆನೆಯನ್ನು ಮಾವುತ ಖುದ್ದೂಸ್ ಅವರು ಕಟ್ಟಿ ಹಾಕದೇ, ತಮ್ಮ ನಿಗಾದಲ್ಲಿ ಮುಕ್ತವಾಗಿ ಕಾಡಿನಲ್ಲಿ ಓಡಾಡುವಂತೆ ಮಾಡಿದ್ದರು. ಅದರ ಪರಿಣಾಮವಾಗಿ ಮಸ್ತ್ ಸ್ಥಿತಿಯಲ್ಲಿದ್ದರೂ "ಗಜೇಂದ್ರ" ಆನೆಯು ಮಾವುತ ಖುದ್ದೂಸ್ ಅವರೊಂದಿಗೆ ಸಹನೆಯಿಂದ ಇರುತ್ತಿತ್ತು.

2010ರ ಏಪ್ರಿಲ್ ತಿಂಗಳಿನಲ್ಲಿ ಹಾಸನದ ಆಲೂರು ಅರಣ್ಯ ವಲಯದಲ್ಲಿನ "ಆಪರೇಷನ್ ಮಾಗಡಿ ಹಳ್ಳಿ" ಕಾರ್ಯಾಚರಣೆಯಲ್ಲಿ ಎರಡು ಕಾಡಾನೆಗಳನ್ನು ಹಿಡಿಯಲು ಪ್ರಮುಖ ಪಾತ್ರವಹಿಸಿದ "ಗಜೇಂದ್ರ" ಆನೆಯನ್ನು ಆಗ ನಿರ್ವಹಿಸಿದ್ದು ಕೂಡ ಇದೇ ಮಾವುತರಾದ ಖುದ್ದೂಸ್ ಅವರು ಎನ್ನುವುದನ್ನು ಮರೆಯುವಂತಿಲ್ಲ.

ಮಾವುತ ಖುದ್ದೂಸ್ ಅವರಿಗೆ ಅನ್ಯಾಯ:

ಸುಮಾರು ಒಂದು ವರ್ಷದ ಅವಧಿಯಲ್ಲಿ "ಗಜೇಂದ್ರ" ಆನೆಯನ್ನು ಕಾಳಜಿಯಿಂದ ನೋಡಿಕೊಂಡು ಉತ್ತಮ ಸೇವೆ ಮಾಡಿದ ಮಾವುತ ಖುದ್ದೂಸ್ ಅವರನ್ನು ಈ ಬಾರಿಯ ದಸರಾಕ್ಕೆ ಮುನ್ನವೇ ಸಲ್ಲದ ಆರೋಪ ಹೊರಿಸಿ, ಆನೆಯಿಂದ ದೂರ ಮಾಡಲಾಗಿದೆ. ವರ್ಷಪೂರ್ತಿ "ಗಜೇಂದ್ರ" ಆನೆಯನ್ನು ನೋಡಿಕೊಳ್ಳುವಾಗ ಮಾವುತ ಖುದ್ದೂಸ್ ಅವರ ನಡವಳಿಕೆಯ ಬಗ್ಗೆ ಒಂದು ಮಾತೂ ಆಡದ ಅರಣ್ಯ ಇಲಾಖೆ ಅಧಿಕಾರಿಗಳು ದಸರಾ ಹತ್ತಿರಕ್ಕೆ ಬಂದಾಗಲೇ ಧ್ವನಿ ಬದಲಾಯಿಸಿದರು.

"ಗಜೇಂದ್ರ" ಆನೆಯ ಮಾವುತ ಖುದ್ದೂಸ್ ಅವರಿಗೆ ಒಂದು ಮಾತು ಕೂಡ ಕೇಳದೆಯೇ ಆನೆಯನ್ನು ದಸರಾಕ್ಕೆ ಮೊದಲ ಬ್ಯಾಚಿನಲ್ಲಿಯೇ ತೆಗೆದುಕೊಂಡು ಹೋಗಲಾಯಿತು. ವಿಚಿತ್ರವೆಂದರೆ ಹಿಂದೆ ಮತ್ತಿನಲ್ಲಿ ದಾಂದಲೆ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳ ಕೋಪಕ್ಕೆ ಗುರಿಯಾಗಿದ್ದ ಮಾವುತ ರಾಮ ಅವರಿಗೇ ಮತ್ತೆ "ಗಜೇಂದ್ರ" ಆನೆಯನ್ನು ವಹಿಸಲಾಗಿದೆ. ಇನ್ನೊಂದು ಗಮನಿಸುವ ಅಂಶವೆಂದರೆ ಮಾವುತ ರಾಮ ಅವರಿಗೆ ಆರೋಗ್ಯ ತೊಂದರೆಯೂ ಇದೆ. ರಾಮ ಅವರು ಪೀಟ್ಸ್ (ಎಪಿಲೆಪ್ಸಿ) ತೊಂದರೆ ಹೊಂದಿದ್ದಾರೆ ಎನ್ನಲಾಗಿದೆ. ಈ ಅಂಶವನ್ನು ಕೂಡ ಅರಣ್ಯ ಇಲಾಖೆಯ ಅಧಿಕಾರಿಗಳು ಮರೆತಂತಿದೆ. ಆನೆಯನ್ನು ನಿರ್ವಹಿಸುವಾಗ ಈ ರೋಗ ತೊಂದರೆಯು ಕಾಡಿದರೆ ಆನೆಯು ಜನಜಂಗುಳಿಯ ನಡುವೆ ನಿಯಂತ್ರಣ ತಪ್ಪಿ ಹೋಗಬಹುದು ಎನ್ನುವುದನ್ನು ಕೂಡ ಅರಣ್ಯ ಇಲಾಖೆಯ ಅಧಿಕಾರಿಗಳು ಯೋಚನೆ ಮಾಡಿಲ್ಲವೆಂದು ಅನಿಸುತ್ತದೆ.

ಅಗತ್ಯ ಇದ್ದಾಗ ಮಾತ್ರ ಖುದ್ದೂಸ್ ಬೇಕು:

ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಆನೆಗಳ ವಿಷಯದಲ್ಲಿ ಸಂಕಷ್ಟಗಳು ಎದುರಾದಾಗ ಮಾತ್ರ ಅನುಭವಿ ಮಾವುತ ಖುದ್ದೂಸ್ ಬೇಕಾಗುತ್ತದೆ. ತಮ್ಮ ಕೆಲಸ ಮುಗಿದ ನಂತರ ಇದೇ ಮಾವುತ ಖುದ್ದೂಸ್ ಅವರನ್ನು ನಿರ್ಲಕ್ಷಿಸಲಾಗುತ್ತದೆ. ಮಸ್ತ್ ಸ್ಥಿತಿಯಲ್ಲಿದ್ದ "ಗಜೇಂದ್ರ" ಆನೆಯನ್ನು ನಿಭಾಯಿಸುವುದಕ್ಕೆ ಮಾವುತ ಖುದ್ದೂಸ್ ಬೇಕಾಯಿತು. ಆದರೆ ಅದೇ ದಸರಾಕ್ಕೆ "ಗಜೇಂದ್ರ" ಆನೆಯನ್ನು ತೆಗೆದುಕೊಂಡು ಹೋಗುವಾಗ ಮಾವುತ ಖುದ್ದೂಸ್ ಬೇಡವಾದರು! ಹೇಗಿದೆ ನೋಡಿ; ಅರಣ್ಯ ಇಲಾಖೆಯ ಅಧಿಕಾರಿಗಳ ಯೋಚನೆ!

ಒತ್ತಾಯ ಹಾಗೂ ವಿನಂತಿ:

ಒಂದು ವರ್ಷದವರೆಗೆ "ಗಜೇಂದ್ರ" ಆನೆಯನ್ನು ನಿಭಾಯಿಸಿ ಅದರೊಂದಿಗೆ ಆತ್ಮೀಯತೆಯ ಬಂಧನವನ್ನು ಬೆಸೆದುಕೊಂಡಿರುವ ಮಾವುತ ಖುದ್ದೂಸ್ ಅವರಿಗೆ ನ್ಯಾಯ ಸಿಗುವಂತಾಗಬೇಕು. ಅವರು ಮತ್ತೆ "ಗಜೇಂದ್ರ" ಆನೆಯ ಜೊತೆಗೆ ಇರುವ ಅವಕಾಶ ನೀಡಬೇಕು. ರಾಜ್ಯದ ಅತ್ಯಂತ ಪರಿಣತ ಮಾವುತರಲ್ಲಿ ಒಬ್ಬರೆನ್ನುವ ಖ್ಯಾತಿ ಹೊಂದಿರುವ ಖುದ್ದೂಸ್ ಅವರನ್ನು "ಗಜೇಂದ್ರ" ಆನೆಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕಾಗಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿನಂತಿ ಮಾಡುತ್ತೇನೆ.