ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆ ಎನ್ನುವ ಬೂಟಾಟಿಕೆ


ಬೆಲೆ ಏರಿಕೆ ವಿರುದ್ಧ ಬಿ.ಜೆ.ಪಿ. ಸೇರಿದಂತೆ ಇತರ ಪಕ್ಷಗಳು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯು ಬರೀ ಬೂಟಾಟಿಕೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆ ಎನ್ನುವ ನೆಪದಲ್ಲಿ ಕೇವಲ ಕೃಷಿ ಉತ್ಪನ್ನಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಈ ಮಾತುಗಳು ರೈತ ವಿರೋಧಿ ಎನಿಸುತ್ತವೆ ಎನ್ನುವುದನ್ನು ಅವರು ಸ್ಪಷ್ಟವಾಗಿ ಅರಿಯುವುದು ಒಳಿತು.

ದಿನನಿತ್ಯದ ಜೀವನಕ್ಕೆ ಅಗತ್ಯವಿರುವ ವಿವಿಧ ಕಂಪೆನಿ ಉತ್ಪಾದಿತ ವಸ್ತುಗಳ ಕಡೆಗೆ ಇವರ ಗಮನ ಹರಿಯುತ್ತಲೇ ಇಲ್ಲ. ಕೇವಲ ಕೃಷಿ ಉತ್ಪನ್ನಗಳ ಕುರಿತು ಮಾತ್ರ ಧ್ವನಿ ಎತ್ತಿದ್ದಾರೆ. ಇದು ಪ್ರತಿಭಟನಾಕಾರರ ಯೋಚನೆಯು ಯಾವರೀತಿಯಲ್ಲಿದೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ರೈತ ಬೆಳೆದ ಬೆಳೆಯ ಬೆಲೆ ಮಾತ್ರ ಕಡಿಮೆ ಆಗಬೇಕು, ಅದೇ ಕಂಪೆನಿಗಳು ಉತ್ಪಾದಿಸುವ ನಿತ್ಯೋಪಯೋಗಿ ವಸ್ತುಗಳ ಬೆಲೆ ಎಷ್ಟಾದರೂ ಇರಲಿ, ಆ ಬಗ್ಗೆ ಮಾತನಾಡುವುದೇ ಇಲ್ಲ.

ಕಂಪೆನಿ ಉತ್ಪನ್ನಗಳ ಬೆಲೆಯನ್ನು ಉತ್ಪಾದಕರು ಮನಬಂದಂತೆ ಹೆಚ್ಚಿಸುತ್ತಿದ್ದರೂ ಅದರ ಬಗ್ಗೆ ಚಕಾರವನ್ನೂ ಎತ್ತುವುದಿಲ್ಲ ಬಿ.ಜೆ.ಪಿ.ಯವರು. ಅವರಿಗೆ ಕೇವಲ ರೈತ ಬೆವರು ಸುರಿಸಿ ಬೆಳೆದ ತರಕಾರಿ ಹಾಗೂ ಧಾನ್ಯಗಳ ಮೇಲೆ ಮಾತ್ರ ಕಣ್ಣು. ಪ್ರತಿಭಟನೆ ನಡೆಸುವಾಗ ಅವರು ಪ್ರದರ್ಶಿಸುವುದು ಕೂಡ ತರಕಾರಿ ಹಾಗೂ ಆಹಾರ ಧಾನ್ಯಗಳನ್ನು ಮಾತ್ರ. ಬೆಲೆ ಏರಿಕೆಗೆ ಕಾರಣ ಪೆಟ್ರೋಲ್ ಹಾಗೂ ಡೀಸಲ್ ಬೆಲೆ ಹೆಚ್ಚಳ ಕಾರಣವೆಂದು ಹೇಳುತ್ತಾರೆ. ಅಂದರೆ ಅವರಿಗೆ ಕಾಳಜಿ ಇರುವುದು ಕೇವಲ ಆಹಾರ ಪದಾರ್ಥ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ಪೂರೈಸುವ ಮಧ್ಯವರ್ತಿಗಳು ಹಾಗೂ ಸಾಗಣೆದಾರರ ಬಗ್ಗೆ ಮಾತ್ರ ಕಾಳಜಿ.

ರೈತ ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗದಿದ್ದರೂ, ಕೃಷಿ ಉತ್ಪನ್ನಗಳ ಬೆಲೆಯು ಮಧ್ಯವರ್ತಿಗಳ ಅಟ್ಟಹಾಸದ ಪರಿಣಾಮವಾಗಿ ಮುಗಿಲೆತ್ತರ ಮುಟ್ಟುತ್ತಿವೆ ಎನ್ನುವುದನ್ನು ಅವರು ಅರಿಯುತ್ತಿಲ್ಲ. ಬಿ.ಜೆ.ಪಿ. ಸೇರಿದಂತೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಗದ್ದಲ ಮಾಡುತ್ತಲಿವೆ. ಆದರೆ ಈಗ ಪ್ರತಿಭಟನೆ ಮಾಡುತ್ತಿರುವವರು ಹಿಂದೆ ಎನ್.ಡಿ.ಎ. ಸರ್ಕಾರ ಇದ್ದಾಗ ಎಷ್ಟು ಬಾರಿ ಪೆಟ್ರೋಲ್ ಹಾಗೂ ಡೀಸಲ್ ಬೆಲೆ ಏರಿಸಲಾಯಿತು ಮತ್ತು ಗ್ಯಾಸ್ ಬೆಲೆ ಹೆಚ್ಚಾಗಿದ್ದು ಎಷ್ಟು ಎನ್ನುವುದನ್ನು ವಿಶ್ಲೇಷಣೆ ಮಾಡುವುದು ಒಳಿತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬಲೆಗೆ ತಕ್ಕಂತೆ ದೇಶದಲ್ಲಿಯೂ ಬೆಲೆಯಲ್ಲಿ ವ್ಯತ್ಯಾಸ ಆಗುತ್ತದೆ ಎನ್ನುವ ಸಾಮಾನ್ಯ ಜ್ಞಾನವು ಬಿ.ಜೆ.ಪಿ. ಸೇರಿದಂತೆ ಎಲ್ಲ ಪಕ್ಷಗಳಿಗೂ ಗೊತ್ತಿರದ ವಿಷಯವೇನಲ್ಲ.

ಈಗಂತೂ ತೈಲ ಪೂರೈಕೆ ಕಂಪೆನಿಗಳು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಆಗುವ ಬೆಲೆ ವ್ಯತ್ಯಾಸಕ್ಕೆ ತಕ್ಕಂತೆ ದೇಶದಲ್ಲಿ ಬೆಲೆಯನ್ನು ಹೆಚ್ಚಿಸುವ ಹಾಗೂ ಕಡಿಮೆ ಮಾಡುವ ಅವಕಾಶವನ್ನು ಪಡೆದುಕೊಂಡಿವೆ ಎನ್ನುವುದನ್ನು ವಿವರಿಸಿ ಹೇಳಬೇಕಾಗಿಲ್ಲ. ಆದರೆ ಕಂಪೆನಿಗಳು ಬೆಲೆ ಹೆಚ್ಚಿಸುತ್ತವೆ ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಕಡಿಮೆಯಾದಾಗ ಇಲ್ಲಿಯೂ ಬೆಲೆ ಇಳಿಸುವುದಿಲ್ಲ ಎನ್ನುವ ಟೀಕೆಯನ್ನು ಮಾತ್ರ ಒಪ್ಪಬಹುದು. ಆದರೆ ಅದಕ್ಕೆಲ್ಲಾ ಕೇಂದ್ರ ಸರ್ಕಾರವನ್ನು ಹೊಣೆಮಾಡುವ ಮುನ್ನ ಹಿಂದೆ ಬಿ.ಜೆ.ಪಿ. ನೇತೃತ್ವದ ಸರ್ಕಾರ ಇದ್ದಾಗ ಏನಾಗಿತ್ತು ಎನ್ನುವುದನ್ನೂ ಪುನರಾವಲೋಕನ ಮಾಡಿಕೊಳ್ಳುವುದು ಸರಿ.

ಆದರೆ ಬಿ.ಜೆ.ಪಿ. ಹಾಗೂ ಇತರ ಪಕ್ಷಗಳು ಪ್ರಧಾನಿ ಮನಮೋಹನ್ ಸಿಂಗ್ ಅವರ ಸರ್ಕಾರವನ್ನು ಕಾರಣವಿಲ್ಲದೇ ದೂರುತ್ತಿರುವುದು ವಿಪರ್ಯಾಸ. ರೈತರು ಬೆಳೆದ ಬೆಳೆಗೆ ತಕ್ಕ ಬೆಲೆಯೂ ಸಿಗಬೇಕು, ಗ್ರಾಹಕರಿಗೆ ತೃಪ್ತಿಕರವಾದ ಬೆಲೆಗೆ ಕೃಷಿ ಉತ್ಪನ್ನಗಳು ಲಭ್ಯವಾಗಬೇಕು ಎನ್ನುವ ವಿಚಾರದಲ್ಲಿ ಬಿ.ಜೆ.ಪಿ. ಹಾಗೂ ಇನ್ನಿತರ ಪಕ್ಷಗಳು ಮಾತನಾಡಲಿ. ಆಗ ಅದು ವಿವೇಚನೆಯುಳ್ಳ ಮಾತು ಎನಿಸುತ್ತದೆ. ಆದರೆ ತರ್ಕವಿಲ್ಲದೇ ಕೇವಲ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡುವುದು ಕೇವಲ ಬೂಟಾಟಿಕೆ ಎನಿಸುತ್ತದೆ.

ಇನ್ನೂ ಮಹತ್ವದ ಅಂಶವೂ ಇದೆ. ಬಿ.ಜೆ.ಪಿ. ಇನ್ನಿತರ ಪಕ್ಷಗಳು ಬೆಲೆ ಏರಿಕೆ ಪ್ರಶ್ನೆ ಎತ್ತುವಾಗ ಕೇವಲ ಖಾದ್ಯ ಪದಾರ್ಥಗಳ ಕುರಿತು ಮಾತ್ರ ಮಾತನಾಡುವ ಬದಲು, ಕಂಪೆನಿ ಉತ್ಪಾದನೆಗಳಾಗಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆಯೂ ಮಾತನಾಡಲಿ. ಆದರೆ ಆ ಗಟ್ಟಿತನವನ್ನು ಬಿ.ಜೆ.ಪಿ. ಈವರೆಗೆ ಮಾಡಿಲ್ಲ. ಕಡ್ಡಿ ಪೆಟ್ಟಿಗೆಯಿಂದ ಹಿಡಿದು ಇನ್ನಿತರ ದಿನನಿತ್ಯ ಬಳಕೆಯ ಅನೇಕ ಕಂಪೆನಿ ಉತ್ಪನ್ನಗಳ ಕುರಿತೂ ಧ್ವನಿ ಎತ್ತಲಿ. ಆದರೆ ಬಿ.ಜೆ.ಪಿ. ಹಾಗೂ ಇತರ ಪಕ್ಷಗಳು ಹಾಗೆ ಮಾಡುವುದಿಲ್ಲ. ಅದಕ್ಕೆ ಕಾರಣ ಅವರದ್ದು ಕೇವಲ ರೈತರ ಹಿತಕ್ಕೆ ಧಕ್ಕೆ ತರುವಂಥ ಮನೋಭಾವದ ಯೋಚನೆ.

ನಿಜವಾಗಿ ಅಗತ್ಯ ವಸ್ತುಗಳ ಬೆಲೆ ಕಡಿಮೆ ಆಗಬೇಕು ಎನ್ನುವ ಕಾಳಜಿ ಇದ್ದರೆ ರೈತರು ಬೆಳೆಯುವ ಬೆಳೆಯ ಬಗ್ಗೆ ಮಾತನಾಡುವ ಬದಲು, ಎಲ್ಲ ಅಗತ್ಯ ವಸ್ತುಗಳ ಕುರಿತು ಮಾತನಾಡಲಿ. ಜೊತೆಗೆ ರೈತರ ಹಿತಕ್ಕೆ ಧಕ್ಕೆ ಆಗದ ರೀತಿಯಲ್ಲಿ ಬೆಲೆಗಳಿಗೆ ಕಡಿವಾಣ ಹಾಕುವ ಕುರಿತು ಸೂಕ್ತ ವೇದಿಕೆಯಲ್ಲಿ ಚರ್ಚೆ ಮಾಡಲಿ. ಬರಿ ಬೀದಿಗೆ ಇಳಿದು ಪ್ರತಿಭಟನೆ ಮಾಡುವುದು ಬಿಟ್ಟು; ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ಬೆಲೆ ನಿಯಂತ್ರಣ ಮಾಡುವುದಕ್ಕೆ ವಿರೋಧ ಪಕ್ಷಗಳು ಸಹಕಾರ ನೀಡಲಿ.

ರೈತರಿಗೆ ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗುವಂಥ; ಸಾಮಾನ್ಯ ಜನರಿಗೆ ಮೆಚ್ಚುಗೆ ಆಗುವ ರೀತಿಯಲ್ಲಿ ಅಗತ್ಯ ವಸ್ತುಗಳು ಸಿಗುವಂತೆ ಮಾಡುವ ಮಾರ್ಗವೊಂದು ಖಂಡಿತ ಇದೆ. ಆದರೆ ಆ ಬಗ್ಗೆ ಯೋಚನೆ ಮಾಡುವುದು ಕೇವಲ ಕೇಂದ್ರ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಅದಕ್ಕೆ ರಾಜ್ಯ ಸರ್ಕಾರಗಳೂ ತಮ್ಮ ಕೊಡುಗೆ ನೀಡುವುದು ಅಗತ್ಯವೂ ಅಗಿದೆ. ಕೇಂದ್ರ ಸರ್ಕಾರವನ್ನು ಬೆಲೆ ಏರಿಕೆಗಾಗಿ ದೂರುತ್ತಿರುವ ಬಿ.ಜೆ.ಪಿ. ಸೇರಿದಂತೆ ಇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳೂ ಇಂಥದೊಂದು ಸಹಕಾರ ನೀಡುತ್ತವೆಯೇ? ಹಾಗೆ ಸಹಕಾರ ನೀಡುವುದಾದರೆ ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸುವುದು ಖಂಡಿತ ಸಾಧ್ಯ!

ನಾಡಿನ ಹಿತ ಬಯಸುವ

ಬಿ.ಬಿ. ರಾಮಸ್ವಾಮಿ ಗೌಡ
ಶಾಸಕರು, ಕುಣಿಗಲ್