ಅಕ್ರಮ ಗಣಿಗಾರಿಕೆ ಏನೆಂದು ಜನರಿಗೆ ತಿಳಿಸುವುದು ಅಗತ್ಯ


"ಅಕ್ರಮ ಗಣಿಗಾರಿಕೆ" ಎನ್ನುವ ಮಾತು ಬೆಳಗಾದರೆ ಸುದ್ದಿ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ಕೇಳುತ್ತಲೇ ಇದೆ. ಆದರೆ ಯಾವೊಂದು ಮಾಧ್ಯಮದಲ್ಲಿ ಅಕ್ರಮ ಗಣಿಗಾರಿಕೆ ಎಂದರೇನು ಎನ್ನುವುದನ್ನು ವಿವರಿಸಿ ಹೇಳುವ ಪ್ರಯತ್ನ ಮಾತ್ರ ನಡೆದಿಲ್ಲ. ಆದ್ದರಿಂದ ಜನಸಾಮಾನ್ಯರಿಗೆ ಈ ವಿಷಯದ ಕರಾಳ ಸ್ವರೂಪ ಏನೆನ್ನುವುದು ಸ್ಪಷ್ಟವಾಗಿ ಅರಿವಾಗುತ್ತಿಲ್ಲ. ಮಾಧ್ಯಮಗಳು ಈ ವಿಷಯವನ್ನು ಜನರಿಗೆ ತಿಳಿಹೇಳುವ ಕೆಲಸವನ್ನು ಮಾಡುವುದು ಅಗತ್ಯವೂ ಆಗಿದೆ. ಆ ನಿಟ್ಟಿನಲ್ಲಿ ನನ್ನ ಈ ಕೆಲವು ಮಾತುಗಳು ಅಕ್ರಮ ಗಣಿಗಾರಿಕೆ ಎಂದರೇನು ಎನ್ನುವುದನ್ನು ಮನದಟ್ಟು ಮಾಡುವಲ್ಲಿ ಸಹಕಾರಿ ಆಗುತ್ತವೆ ಎಂದುಕೊಂಡಿದ್ದೇನೆ. ತಾವು ತಮ್ಮ ಮಾಧ್ಯಮದ ಮೂಲಕ ಇದನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಬೇಕೆಂದು ತಮ್ಮಲ್ಲಿ ವಿನಂತಿ ಮಾಡುತ್ತೇನೆ.

ನೈಸರ್ಗಿಕ ಸಂಪತ್ತಿನ ಲೂಟಿ:

ಅಕ್ರಮ ಗಣಿಗಾರಿಕೆಯು ನೈಸರ್ಗಿಕ ಸಂಪತ್ತಿನ್ನು ಯಥೇಚ್ಛವಾಗಿ ಲೂಟಿ ಮಾಡುವ ಕರಾಳ ಕೃತ್ಯ. ಇದನ್ನು ಅಧಿಕಾರದ ಚುಕ್ಕಾಣಿ ಹಿಡಿದವರಲ್ಲಿಯೇ ಕೆಲವರು ಮಾಡುತ್ತಿದ್ದಾರೆ ಎನ್ನುವುದು ಇನ್ನೂ ದೊಡ್ಡ ದುರಂತ. ಇದು ಬ್ರಿಟಿಷರು ದೇಶದ ಸಂಪತ್ತನ್ನು ಲೂಟಿ ಹೊಡೆದದ್ದಕ್ಕಿಂತ ದೊಡ್ಡ ಹೇಯ ಕೃತ್ಯ. ಆಗ ಹೊರಗಿನವರು ಬಂದು ಮಾಡಿದ್ದನ್ನು ಈಗ ದೇಶದೊಳಗೆ ಇರುವವರೇ ಮಾಡುತ್ತಿದ್ದಾರೆ.

ಬ್ರಿಟಿಷರ ವಿರುದ್ಧ ದೇಶದ ಕೋಟಿ ಕೋಟಿ ಜನರು ಹೋರಾಟ ಮಾಡಿದ್ದು ಏಕೆ? ಅವರು ದಬ್ಬಾಳಿಕೆ ನಡೆಸಿ, ನಮ್ಮ ಸಂಪತ್ತನ್ನು ಹೊರಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎನ್ನುವ ಕಾರಣಕ್ಕೆ. ಕೇವಲ ರಾಜಕೀಯ ಸ್ವಾಂತಂತ್ರ್ಯ ಬೇಕು ಎನ್ನುವ ಕಾರಣಕ್ಕಾಗಿ ಅಂದು ಜನರು ಒಂದುಗೂಡಲಿಲ್ಲ. ನಿಜವಾಗಿ ಜನರು ಸ್ವಾತಂತ್ರ್ಯ ಹೋರಾಟಕ್ಕೆ ಒಂದಾಗಿದ್ದು ದೇಶದ ಸಂಪತ್ತನ್ನು ನಮ್ಮಲ್ಲಿಯೇ ಉಳಿಸಿಕೊಳ್ಳಬೇಕು ಹಾಗೂ ದೇಶದ ಸಂಪತ್ತನ್ನು ಕಾಯ್ದುಕೊಳ್ಳಬೇಕೆಂದು.

ದೇಶದ ನೈಸರ್ಗಿಕ ಸಂಪತ್ತನ್ನು ಬ್ರಿಟಿಷರು ಆಗ ಮಂದಗತಿಯ ರೈಲು, ವಾಹನ, ಎತ್ತಿನ ಗಾಡಿ... ಹೀಗೆ ನಿಧಾನ ಸಾರಿಗೆಯ ಮೂಲಕ ಸಾಗಿಸುತ್ತಿದ್ದರು. ಆದ್ದರಿಂದ ಬ್ರಿಟಿಷರು ಭಾರಿ ಪ್ರಮಾಣದಲ್ಲಿ ನಮ್ಮ ಸಂಪತ್ತನ್ನು ಹೊತ್ತು ಹೊರಗೆ ಸಾಗಿಸಲು ಸಾಧ್ಯವಾಗಲಿಲ್ಲ. ಆದರೆ ಇಂದು ಏನಾಗುತ್ತಿದ್ದೆ? ನಮ್ಮವರೇ ದಿನವೊಂದಕ್ಕೆ ಸಾವಿರಾರು ಲಾರಿಗಳಷ್ಟು ಅದಿರನ್ನು ಎತ್ತಿ ಸಾಗಿಸುತ್ತಿದ್ದಾರೆ. ವಿಚಿತ್ರವೆಂದರೆ ಅದರಲ್ಲಿ ಮುಕ್ಕಾಲು ಭಾಗಕ್ಕೂ ಹೆಚ್ಚು ಲಾರಿಗಳು ಅಕ್ರಮವಾಗಿ ವಿವಿಧ ಬಂದರುಗಳ ಕಡೆಗೆ ಸಾಗುತ್ತವೆ. ಅವುಗಳಿಗೆ ಕಡಿವಾಣ ಹಾಕುವ ಪ್ರಯತ್ನವು ಕಳೆದ ಎರಡು ವರ್ಷಗಳಲ್ಲಿಯಂತೂ ನಡೆದೇ ಇಲ್ಲ.

ವಿದೇಶಿ ಲೂಟಿಕೋರರನ್ನು ಓಡಿಸಿದೆವು; ನಮ್ಮವರಿಗೆ ಏನು ಮಾಡುವುದು?:

ಬ್ರಿಟಿಷರು ದಬ್ಬಾಳಿಕೆ ಮಾಡಿ ನಮ್ಮ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದಾಗ ದೇಶವೇ ಒಂದಾಗಿ ಹೋರಾಡಿ, ಅವರನ್ನು ದೇಶ ಬಿಟ್ಟು ಓಡಿಸಿದ್ದಾಯಿತು. ಆದರೆ ಈಗ ನಮ್ಮ ಜನರೇ ತಮ್ಮ ಭಾಹು ಮತ್ತು ಧನ ಬಲದಿಂದ ನೆಲದ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದಾರೆ. ಇವರು ಬಲವಾಗಿ ಬೆಳೆದಿದ್ದಾರೆ. ಸರ್ಕಾರದ ಮೇಲೆ ಹಿಡಿತ ಸಾಧಿಸಿ, ಆಟವಾಡಿಸುವ ಮಟ್ಟದಲ್ಲಿ ಗಟ್ಟಿಯಾಗಿದ್ದಾರೆ. ಇವರ ವಿರುದ್ಧ ಏನು ಮಾಡುವುದು? ಇದು ಈಗಿನ ಸವಾಲು.

ಇಂಥ ಲೂಟಿಕೋರರ ವಿರುದ್ಧವೂ ಜನಾಂದೋಲನ ನಡೆಯಬೇಕು. ಅದು ಸಾಧ್ಯವಾಗುವುದು ಜನರಿಂದ. ಆದ್ದರಿಂದ ಜನರಿಗೆ ಮೊದಲು ಈ ಅಕ್ರಮ ಗಣಿಗಾರಿಕೆ ಬಗ್ಗೆ ಮಾಹಿತಿ ನೀಡುವುದು ಅಗತ್ಯವಾಗಿದೆ. ಜನರಿಗೆ ಈ ಅಕ್ರಮ ಗಣಿಗಾರಿಕೆಯಿಂದ ಅವರ ಮೇಲೆ ಆಗುವ ಪರಿಣಾಮದ ಬಗ್ಗೆಯೂ ಮಾಹಿತಿ ನೀಡುವ ಕೆಲಸ ಮಾಡಬೇಕು. ಇದು ಸಾಧ್ಯವಾಗಬೇಕಾಗಿರುವುದು ಮಾಧ್ಯಮಗಳಿಂದ. ಆದರೆ ಮಾಧ್ಯಮಗಳು ಅಕ್ರಮ ಗಣಿಗಾರಿಕೆ ಎಂದು ಮತ್ತೆ ಮತ್ತೆ ಹೇಳುತ್ತಿದ್ದರೂ, ಹಾಗೆಂದರೇನು; ಅದರಿಂದ ಅವರ ಮೇಲೆ ಆಗುವ ದುಷ್ಪರಿಣಾಮದ ಬಗ್ಗೆ ನಿಖರವಾದ ಮಾಹಿತಿ ನೀಡಲೇಬೇಕು. ಆಗಲೇ ಜನಜಾಗೃತಿ ಸಾಧ್ಯವಾಗಿ ಹೋರಾಟದ ಬಲ ಹೆಚ್ಚುತ್ತದೆ.

ಗಣಿಗಾರಿಕೆ ನಡೆಯುವ ಭಾಗದ ಜನರಿಗೇ ಪ್ರಯೋಜನವೇನಿಲ್ಲ:

ಗಣಿಗಾರಿಕೆ ನಡೆಯುವ ಕರ್ನಾಟಕದ ಭಾಗಗಳ ಕಡೆಗೆ ಒಂದು ಬಾರಿ ನೋಡಿದರೆ ಅದರಿಂದ ಆಗಿರುವ ದುಷ್ಪರಿಣಾಮದ ಸ್ಪಷ್ಟ ಅರಿವಾಗುತ್ತದೆ. ವಿಚಿತ್ರವೆಂದರೆ ಆ ಭಾಗದ ಸಾಮಾನ್ಯ ಜನರಿಗೆ ಅದರಿಂದ ಯಾವುದೇ ಪ್ರಯೋಜನವೂ ಆಗುತ್ತಿಲ್ಲ. ಕೆಲವರು ಮಾತ್ರ ಆರ್ಧಿಕವಾಗಿ ಪ್ರಬಲರಾಗುತ್ತಿದ್ದಾರೆ. ಸಾಮಾನ್ಯ ಜನರಿಗೆ ಈ ಗಣಿಗಾರಿಕೆಯಿಂದ ಹೆಚ್ಚಿನ ಉದ್ಯೋಗಾವಕಾಶಗಳು ಸಿಕ್ಕಿಲ್ಲ. ಇನ್ನು ಆ ಭಾಗದ ಜನರು ರಸ್ತೆಗೆ ಇಳಿಯುವುದೇ ಕಷ್ಟವೆನ್ನುವಂತೆ ಆಗಿದೆ. ನಿರಂತರವಾಗಿ ಲಾರಿಗಳ ಓಡಾಟದ ಪರಿಣಾಮವಾಗಿ ಬಾಕಿ ಜನರಿಗೆ ಸಂಚಾರವು ದುಸ್ಥರವಾಗಿದೆ.

ನಮ್ಮ ನಾಡಿನ ಸಂಪತ್ತನ್ನು ನಮ್ಮಲ್ಲಿಯೇ ಪರಿಷ್ಕರಿಸಿ, ಇಲ್ಲಿಯೇ ಅದು ಕೊನೆಯದಾಗಿ ಲೋಹದ ರೂಪ ಪಡೆಯುವಂಥ ಸಾಧ್ಯತೆಗಳೇ ಇಲ್ಲವಾಗಿವೆ. ಆದ್ದರಿಂದ ನೇರವಾಗಿ ನಮ್ಮ ಪ್ರಾಕೃತಿಕ ಸಂಪತ್ತು ವಿದೇಶಕ್ಕೆ ಹೋಗುತ್ತಿದೆ. ಇದರಿಂದಾಗಿ ಗಣಿಗಾರಿಕೆಯು ನಾಡಿಗೆ ಯಾವುದೇ ರೀತಿಯಲ್ಲಿ ಪ್ರಯೋಜನಕಾರಿ ಆಗುತ್ತಿಲ್ಲ. ಅದಕ್ಕಿಂತ ದೊಡ್ಡ ಸಮಸ್ಯೆ ಎಂದರೆ ಅಕ್ರಮವಾಗಿ ನಮ್ಮಲ್ಲಿನ ಲೋಹ ಸಂಪತ್ಭರಿತವಾದ ಮಣ್ಣನ್ನು ಅಕ್ರಮವಾಗಿ ವಿದೇಶಕ್ಕೆ ಹೋಗುತ್ತಿರುವುದು.

ಅಕ್ರಮವಾಗಿ ಸಾವಿರಾರು ಲಾರಿ ಖನಿಜ ಸಂಪತ್ತು ಹೋರಗೆ ಹೋಗುತ್ತಿದ್ದರೂ, ಅದರಿಂದ ರಾಜ್ಯಕ್ಕೆ ಆದಾಯವೇನು ಬರುತ್ತಿಲ್ಲ. ಬರುತ್ತಿರುವುದು ಎಳ್ಳುಕಾಳಿನಷ್ಟು. ಬಾಕಿ ಎಲ್ಲ ಲಾಭವನ್ನೂ ಅಕ್ರಮ ಗಣಿಗಾರಿಕೆಯಿಂದ ಕೊಬ್ಬಿರುವ ಗಣಿಧಣಿಗಳೇ ನುಂಗಿ ಹಾಕುತ್ತಿದ್ದಾರೆ. ಅವರು ರಾಜ್ಯದ ಪ್ರಾಕೃತಿಕ ಸಂಪತ್ತನ್ನು ತಮ್ಮದೇ ಸ್ವತ್ತು ಎನ್ನುವ ರೀತಿಯಲ್ಲಿ ನಿರಾತಂಕವಾಗಿ ಹೊರ ದೇಶಗಳಿಗೆ ಸಾಗಿಸುತ್ತಿದ್ದಾರೆ. ಅವರೇ ಸರ್ಕಾರದಲ್ಲಿಯೂ ಇರುವುದರಿಂದ, ರಾಜ್ಯವೇ ತಮ್ಮದು ಎನ್ನುವಂತೆ ದರ್ಪ ತೋರುತ್ತಿದ್ದಾರೆ.

ಯಾವುದು ಅಕ್ರಮ?:

ಅಕ್ರಮ ಗಣಿಗಾರಿಕೆ ಎನ್ನುವ ಎರಡು ಪದಗಳು ಮತ್ತೆ ಮತ್ತೆ ಕೇಳುತ್ತಿದ್ದರೂ ಹಾಗೆಂದರೇನು ಎನ್ನುವುದನ್ನು ಸಾಮಾನ್ಯ ಜನರಿಗೆ ವಿವರಿಸಿ ಹೇಳುವ ಪ್ರಯತ್ನವನ್ನು ಯಾರೂ ಮಾಡಿಲ್ಲ. ನಾನು ಇಲ್ಲಿ ಆ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಲು ಬಯಸುತ್ತೇನೆ. ಗಣಿಗಾರಿಕೆ ನಾಡಿಗೆ ಆದಾಯ ತರುವಂಥದಾಗಿದ್ದರೆ; ಅದು ಅಕ್ರಮ ಆಗುವುದಿಲ್ಲ. ಅದೇ ಭೊಕ್ಕಸಕ್ಕೆ ಬಿಡಿಗಾಸನ್ನೂ ತರದೇ ಗಣಿಗಾರಿಕೆ ನಡೆದರೆ ಅದೇ ಅಕ್ರಮ. ಅಕ್ರಮ ಗಣಿಗಾರಿಕೆ ಹಲವಾರು ರೀತಿಯಲ್ಲಿ ನಡೆಯುತ್ತದೆ. ಅವುಗಳಲ್ಲಿ ಕೆಲವು ಅಪಾಯಕಾರಿ ಸ್ವರೂಪದವು. ಅವುಗಳನ್ನು ನಾನಿಲ್ಲಿ ಸಂಪೂರ್ಣ ವಿವರದೊಂದಿಗೆ ಪಟ್ಟಿ ಮಾಡುತ್ತಿದ್ದೇನೆ.

1. ಗಣಿಗಾರಿಕೆ ಉದ್ದೇಶದಿಂದ ಲೀಸ್ ಪಡೆದ ಜಮೀನು ಇದ್ದರೂ ಅದರಲ್ಲಿ ವರ್ಷಕ್ಕೆ ನಿಗದಿ ಮಾಡಿದ ಪ್ರಮಾಣದಲ್ಲಿ ಅದಿರುಯುಕ್ತವಾದ ಮಣ್ಣನ್ನು ತೆಗೆಯಬೇಕು. ಆದರೆ ಲೀಸ್ ಪಡೆದಿದ್ದೇವೆ ಎಂದುಕೊಂಡು ಮನಸೋ ಇಚ್ಛೆಯಾಗಿ ಮಣ್ಣನ್ನು ಎತ್ತಲಾಗುತ್ತಿದೆ. ಆಧುನಿಕ ಯಂತ್ರಗಳಿಂದ ದಿನಕ್ಕೆ ಸಾವಿರಾರು ಲಾರಿ ಅದಿರುಯುಕ್ತವಾದ ಮಣ್ಣನ್ನು ಸಾಗಿಸಲಾಗುತ್ತಿದೆ. ಒಂದು ಲಾರಿ ಮಣ್ಣು ಸಾಗಿಸುವಾಗ ಅದಕ್ಕೆ ಪ್ರತಿಯಾಗಿ ಸರ್ಕಾರಕ್ಕೆ ನಿಗದಿ ಮಾಡಿದ ಶುಲ್ಕವನ್ನು ಪಾವತಿ ಮಾಡಬೇಕು. ಆದರೆ ನೂರು ಲಾರಿಗಳಿಗೆ ಶುಲ್ಕವನ್ನು ಪಾವತಿ ಮಾಡಿ ಸಾವಿರ ಲಾರಿಯಷ್ಟು ಅದಿರುಯುಕ್ತ ಮಣ್ಣು ಸಾಗಿಸಲಾಗುತ್ತಿದೆ. ಇದರಿಂದಾಗಿ ರಾಜ್ಯದ ಭೊಕ್ಕಸಕ್ಕೆ ಭಾರಿ ಪ್ರಮಾಣದ ನಷ್ಟವಾಗುತ್ತದೆ. ಅಷ್ಟೇ ಅಲ್ಲ ನಾಡಿನ ಸಂಪತ್ತು ಕೆಲವೇ ವ್ಯಕ್ತಿಗಳ ಲಾಭಕ್ಕಾಗಿ ಹೊರಗೆ ಹರಿದು ಹೋಗುತ್ತದೆ. ಇದು ಅಕ್ರಮ ಗಣಿಗಾರಿಕೆ.

2. ಲೀಸ್ ಪಡೆದ ಬಲಾಢ್ಯರು ಪಕ್ಕದಲ್ಲಿನ ಬೇರೆಯವರ ಒಡೆತನದ ಜಮೀನನ್ನು ಆಕ್ರಮಣ ಮಾಡಿಕೊಂಡು ಅಲ್ಲಿಂದಲೂ ಅದಿರುಯುಕ್ತ ಮಣ್ಣನ್ನು ಎತ್ತಿ ಲೋಡ್ ಮಾಡಿ ಸಾಗಿಸುವುದು ಇನ್ನೊಂದು ರೀತಿಯ ಅಕ್ರಮ ಗಣಿಗಾರಿಕೆ. ಇಂಥ ಸಂದರ್ಭದಲ್ಲಿ ಧನ ಹಾಗೂ ಬಾಹುಬಲಿಗಳ ಬಲವನ್ನು ಹೊಂದಿದವರು ಪಕ್ಕದ ಜಮೀನಿನ ದುರ್ಬಲರಾದ ಒಡೆಯರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ. ಇದರಿಂದ ನಿಜವಾಗಿ ಜಮೀನಿನ ಹಕ್ಕು ಹೊಂದಿದವನು ಯಾವುದೇ ಲಾಭವಿಲ್ಲದೇ ಬೇರೆಯವನು ಆರ್ಧಿಕವಾಗಿ ಕೊಬ್ಬಲು ಸಾಧ್ಯವಾಗುತ್ತದೆ. ವಿಚಿತ್ರವೆಂದರೆ ಜಮೀನು ಒಡೆತನ ಹೊಂದಿದವನು ಗಣಿಗಾರಿಕೆ ಮಾಡಿಲ್ಲದಿದ್ದರೂ, ಅದು ಅವನೇ ಮಾಡಿದ ಅಕ್ರಮ ಗಣಿಗಾರಿಕೆ ಎನ್ನುವಂತೆ ಬಿಂಬಿತವಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಅಮಾಯಕರು ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ.

3. ಗಣಿಗಾರಿಕೆ ಉದ್ದೇಶದಿಂದ ಅನುಮತಿ ಪಡೆದು ನಿಗದಿತ ಜಮೀನಿನಿಂದ ಅದಿರುಯುಕ್ತ ಮಣ್ಣನ್ನು ತೆಗೆಯುವ ಬದಲು, ಅದೇ ಅನುಮತಿ ಪತ್ರವನ್ನು ಇಟ್ಟುಕೊಂಡು ಅರಣ್ಯ ಪ್ರದೇಶವನ್ನು ಅತಿಕ್ರಮಣ ಮಾಡಿ ಅಲ್ಲಿಂದಲೂ ಅದಿರುಯುಕ್ತ ಮಣ್ಣನ್ನು ಎತ್ತುವುದು ಅಕ್ರಮ ಗಣಿಗಾರಿಕೆಯ ಇನ್ನೊಂದು ಮುಖ. ಅಷ್ಟೇ ಅಲ್ಲ ಅಕ್ರಮವಾಗಿ ಅರಣ್ಯ ಪ್ರದೇಶದಲ್ಲಿ ಲಾರಿಗಳ ಓಡಾಟಕ್ಕೆ ಮಾರ್ಗಗಳನ್ನು ಕೂಡ ರೂಪಿಸುವುದು ಇನ್ನೊಂದು ಅಪಾಯ. ಇದರಿಂದ ಭೂಮಿಯೊಳಗಿನ ಸಂಪತ್ತಿನ ಜೊತೆಗೆ ಅರಣ್ಯ ಸಂಪತ್ತಿಗೂ ಕುತ್ತು. ಅತಿಕೃಮವಾಗಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಮಾಡುವುದು ಬಲಾಢ್ಯ ಶಕ್ತಿಗಳಾಗಿ ಬೆಳೆದಂಥ ಗಣಿಧಣಿಗಳಿಂದ ಮಾತ್ರ ಸಾಧ್ಯ. ಏಕೆಂದರೆ ಅವರು ಧನಬಲದಿಂದ ಆ ಪ್ರದೇಶದಲ್ಲಿ ತಮ್ಮದೇ ಆದ ಪರ್ಯಾಯವಾದ ಸರ್ಕಾರವೊಂದನ್ನು ಮಾಡಿಕೊಂಡು ಬಿಟ್ಟಿರುತ್ತಾರೆ. ಅವರನ್ನು ಪ್ರಶ್ನಿಸುವ ಗಟ್ಟಿತನ ಯಾವುದೇ ಸರ್ಕಾರಿ ಅಧಿಕಾರಿಗಳಲ್ಲಿಯೂ ಇಲ್ಲವಾಗಿದೆ.

4. ಲೀಸ್ ಪಡೆದ ಪ್ರದೇಶದಿಂದ ನಿಗದಿ ಮಾಡಿದ ಪ್ರಮಾಣದಲ್ಲಿಯೇ ಅದಿರು ತೆಗೆದಿದ್ದಾಗಿ ಕೇವಲ ಕಾಗದದ ಮೇಲೆ ಮಾತ್ರ ದಾಖಲೆ ತೋರಿಸುವ ಗಣಿಧಣಿಗಳು ನಡೆಸಿರುವ ಲೂಟಿ ಯಾವ ಪ್ರಮಾಣದ್ದು ಎನ್ನುವುದು ಅಲ್ಲಿ ಕೊರೆದ ಕಂದಕಗಳನ್ನು ನೋಡಿದಾಗಲೇ ಸ್ಪಷ್ಟವಾಗುತ್ತದೆ. ಅಕ್ರಮ ಗಣಿಗಾರಿಕೆ ಸುಗಮವಾಗುವುದಕ್ಕೆ ಬೃಹತ್ ಯಂತ್ರಗಳು ಕೂಡ ಸಹಕಾರಿಯಾಗಿವೆ. ಅಷ್ಟೇ ಅಲ್ಲ ಹಗಲು ರಾತ್ರಿ ಎನ್ನದೇ ಅದಿರನ್ನು ಹೆಕ್ಕಿ ತೆಗೆಯಲಾಗುತ್ತದೆ. ಹೀಗೆ ಗಣಿಗಳ ಆಳವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದ ಗಣಿಧಣಿಗಳಿಂದ ಸರ್ಕಾರಕ್ಕೆ ಸಲ್ಲುವ ಶುಲ್ಕ ಮಾತ್ರ ತೀರ ಅತ್ಯಲ್ಪ. ಏಕೆಂದರೆ ದಾಖಲೆಯಲ್ಲಿ ಅವರು ತೋರಿಸುವ ಅದಿರು ಸಾಗಣೆಯ ಮಾಹಿತಿ ತೀರ ಕಡಿಮೆ ಆಗಿರುತ್ತದೆ.

5. ಗೋವಾ, ಮಂಗಳೂರು, ಕಾರವಾರ, ವಿಶಾಖಪಟ್ಟಣ, ಮುಂಬೈ ಬಂದರುಗಳ ಕಡೆಗೆ ಸಾಗುವ ಲಾರಿಗಳ ಸಂಖ್ಯೆಯನ್ನು ಗಮನಿಸಿದರೆ ರಾಜ್ಯಕ್ಕೆ ಗಣಿಗಾರಿಕೆಯಿಂದಲೇ ಭಾರಿ ಪ್ರಮಾಣದ ಆದಾಯ ಬರಬೇಕು. ಆದರೆ ಹಾಗೆ ಆಗುವುದೇ ಇಲ್ಲ. ಗಣಿಗಾರಿಕೆಯು ರಾಜ್ಯದ ಭೊಕ್ಕಸಕ್ಕೆ ಲಾಭಕಾರಿ ಆಗಿಯೇ ಇಲ್ಲ. ಇದಕ್ಕೆ ಕಾರಣ ಅಕ್ರಮವಾಗಿಯೇ ಈ ಲಾರಿಗಳ ಓಡಾಟ ಸಾಗಿದೆ. ಚೆಕ್ ಪೋಸ್ಟ್ ಗಳಲ್ಲಿಯೂ ಕೂಡ ಲಾರಿಗಳು ಸಾಗಿ ಹೋದ ದಾಖಲೆಯೇ ಇಲ್ಲದ ರೀತಿಯಲ್ಲಿ ವ್ಯವಸ್ಥೆಯನ್ನು ಗಣಿಧಣಿಗಳು ಮಾಡಿದ್ದಾರೆ. ಚೆಕ್ ಪೋಸ್ಟ್ ಗಳಲ್ಲಿಯೂ ಅಕ್ರಮ ನಡೆಯುತ್ತಿದೆ. ಅಲ್ಲಿ ಒಂದಿಷ್ಟು ಮೂಗುದಾರ ಬಿಗಿಗೊಳಿಸಿದರೆ ಅಕ್ರಮವಾಗಿ ಅದಿರು ಸಾಗಿಸುವುದು ಸಾಧ್ಯವಾಗುವುದಿಲ್ಲ. ಆದರೆ ಹೆಚ್ಚಿನವರು ಗಣಿಧಣಿಗಳ ಧನಬಲದ ಮುಷ್ಟಿಯಲ್ಲಿ ಸಿಲುಕಿರುವುದರಿಂದ ಚಕಾರವನ್ನೂ ಎತ್ತುವುದಿಲ್ಲ.

ಪ್ರಮಾಣಕ್ಕಿಂತ ಹೆಚ್ಚು ಖನಿಜ ಸಾಗಣೆ:

ಒಂದು ಗಣಿಯಿಂದ ಮಣ್ಣು ತೆಗೆದಾಗ ಅದನ್ನು ಒಂದು ಪರಿಮಿತಿ ಇರುವ ಅದಿರು ಪ್ರಮಾಣದೊಂದಿಗೆ ಮಾತ್ರ ರಫ್ತು ಮಾಡಬೇಕು. ಉದಾಹರಣೆಗೆ 63.5 ಪ್ರಮಾಣದಲ್ಲಿ ಕಬ್ಬಿಣ ಯುಕ್ತ ಮಣ್ಣು ಸಾಗಿಸಬೇಕು ಎಂದು ನಿಗದಿ ಆಗಿದ್ದರೆ, ಅಷ್ಟೇ ಪ್ರಮಾಣದಲ್ಲಿ ಕಬ್ಬಿಣ ಯುಕ್ತ ಮಣ್ಣು ಸಾಗಣೆಯಾಗಬೇಕು. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣ ಯುಕ್ತವಾಗಿದ್ದರೆ, ಆ ಮಣ್ಣಿನಲ್ಲಿ ನಿಗದಿತ ಪ್ರಮಾಣದಷ್ಟೇ ಕಬ್ಬಿಣ ಯುಕ್ತವಾಗಿರುವಂತೆ ಮಾಡಲು ಬೇರೆ ಖನಿಜ ರಹಿತವಾದ ಮಣ್ಣು ಸೇರಿಸಿ, ಸರಿದೂಗಿಸಬೇಕು.

ಅಕ್ರಮವಾಗಿ ಗಣಿಗಾರಿಕೆ ನಡೆಸುವವರು ಇದಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ನೇರವಾಗಿ ಲಾರಿಗಳನ್ನು ತುಂಬಿ ಕಳುಹಿಸುತ್ತಿರುತ್ತಾರೆ. ಆಗ ಹೆಚ್ಚಿನ ಪ್ರಮಾಣದಲ್ಲಿ ಅದಿರುಯುಕ್ತ ಮಣ್ಣು ವಿದೇಶಕ್ಕೆ ಹೋಗುತ್ತದೆ. ಇದು ದೇಶಕ್ಕೆ ಆಗುವ ದೊಡ್ಡ ನಷ್ಟ. ಒಂದು; ಮೊದಲೇ ಅಕ್ರಮವಾಗಿ ಈ ಅದಿರು ವಿದೇಶಕ್ಕೆ ಹೋಗುತ್ತಿರುತ್ತದೆ. ಇನ್ನೊಂದು ಆತಂಕವೆಂದರೆ ಹೆಚ್ಚಿನ ಪ್ರಮಾಣದಲ್ಲಿ ಅದಿರು ಹೀಗೆ ನಮ್ಮ ನಾಡಿನಿಂದ ಲೂಟಿಯಾಗುತ್ತದೆ ಎನ್ನುವುದು.

ಅಧಿಕೃತವಾಗಿ ಗಣಿಗಾರಿಕೆ ನಡೆಸುತ್ತೇವೆ ಎಂದು ಹೇಳಿಕೊಳ್ಳುವವರೂ ಹೀಗೆ ಅಕ್ರಮವಾಗಿ ಹೆಚ್ಚಿನ ಪ್ರಮಾಣದಲ್ಲಿ ಖನಿಜಯುಕ್ತವಾದ ಮಣ್ಣನ್ನು ವಿದೇಶಕ್ಕೆ ಸಾಗಿಸುತ್ತಿದ್ದಾರೆ ಎನ್ನುವುದೂ ಗಂಭೀರ ವಿಷಯ. ಇದನ್ನು ನಿಯಂತ್ರಿಸುವುದಕ್ಕಾಗಿ ತಕ್ಕ ಕ್ರಮವನ್ನು ಕೈಗೊಳ್ಳವುದು ಗಣಿಧಣಿಗಳ ಧನಬಲದ ಮುಷ್ಟಿಯಲ್ಲಿ ಸಿಲುಕಿರುವ ಅಧಿಕಾರಿಗಳಿಂದ ಸಾಧ್ಯವಾಗುತ್ತಿಲ್ಲ. ಅವರು ಯಾವುದೇ ಖನಿಜ ಪ್ರಮಾಣವನ್ನು ನೋಡುವುದೇ ಇಲ್ಲ, ಲಾರಿಗಳು ಮುಕ್ತವಾಗಿ ಬಂದರುಗಳ ಕಡೆಗೆ ಹೋಗುವುದಕ್ಕೆ ಅವಕಾಶ ಮಾಡಿಕೊಟ್ಟುಬಿಡುತ್ತಾರೆ.

"ಜೀರೋ ಮೆಟೀರಿಯಲ್":

ಗಣಿಗಾರಿಕೆ ವಿಷಯದಲ್ಲಿ ಹಿಂದಿನ ಸರ್ಕಾರಗಳು ತಪ್ಪು ಮಾಡಿವೆ ಎಂದು ಬಿ.ಜೆ.ಪಿ. ಹೇಳುತ್ತಿದೆ. ಆದರೆ ಬಿ.ಜೆ.ಪಿ. ಸರ್ಕಾರ ಬಂದ ನಂತರವೇ ಬಳ್ಳಾರಿಯಿಂದ ಭಾರಿ ಪ್ರಮಾಣದಲ್ಲಿ ಅದಿರು ಲಾರಿಗಳು ವಿವಿಧ ಬಂದರುಗಳ ಕಡೆಗೆ ಪ್ರಯಾಣ ಮಾಡಿದ್ದು ಎನ್ನುವ ಕಟುಸತ್ಯವನ್ನು ಮುಚ್ಚಿಡಲು ಸಾಧ್ಯವೇ ಇಲ್ಲ. ಬಿ.ಜೆ.ಪಿ. ಸಕರ್ಾರ ಬಂದ ನಂತರ ಅದಿರು ಲಾರಿಗಳ ಓಡಾಟ ಯಾವ ಮಟ್ಟಿಗೆ ಹೆಚ್ಚಿದೆ ಎನ್ನುವುದನ್ನು ಬಳ್ಳಾರಿಯಿಂದ ಹಿಡಿದು, ಹೊಸಪೇಟೆ, ಕೊಪ್ಪಳ, ಗದಗ, ಹಾವೇರಿ... ಮಾರ್ಗದಲ್ಲಿರುವ ಜನರನ್ನು ಕೇಳಿದರೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಅತಿ ಹೆಚ್ಚಿನ ಸಂಖ್ಯೆಯ ಲಾರಿಗಳಲ್ಲಿ "ಜೀರೋ ಮೆಟೀರಿಯಲ್" ತುಂಬಿರುತ್ತದೆ ಎನ್ನುವುದು ಅಲ್ಲಿನ ಜನರಿಗೆ ಸ್ಪಷ್ಟವಾಗಿ ಗೊತ್ತು.

"ಜೀರೋ ಮಟೀರಿಯಲ್" ಎಂದು ಹೆಸರು ಆ ಭಾಗದಲ್ಲಿ ಪ್ರಚಾರಕ್ಕೆ ಬಂದಿದ್ದು ಅಕ್ರಮ ಗಣಿಗಾರಿಕೆಯಿಂದಾಗಿ. "ಜೀರೋ ಮಟೀರಿಯಲ್" ಎಂದರೆ ಯಾವುದೇ ಪರ್ಮಿಟ್ ಇಲ್ಲದ ಹಾಗೂ ಯಾವುದೇ ಗಣಿ ಕಂಪೆನಿಗೂ ಸೇರಿರದ ಖನಿಜಯುಕ್ತವಾದ ಮಣ್ಣು ಎನ್ನುವುದು. ಇಂಥ ಮಣ್ಣು ತುಂಬಿಕೊಂಡ ಸಾವಿರಾರು ಲಾರಿಗಳು ಈ ಭಾಗದಿಂದ ವಿವಿಧ ಬಂದರುಗಳ ಕಡೆಗೆ ಹೋಗುತ್ತವೆ. ವಿಚಿತ್ರವೆಂದರೆ ಅವುಗಳನ್ನು ಯಾರೂ ತಡೆದು ನಿಲ್ಲಿಸಿ, ದಾಖಲೆ ಕೇಳುವುದಿಲ್ಲ. ಏಕೆಂದರೆ ಗಣಿಧಣಿಗಳು ಇಲ್ಲಿ ಧನಬಲದಿಂದ ಗಣಿಧಣಿಗಳು ರೂಪಿಸಿಕೊಂಡಿರುವ ಪರ್ಯಾಯ ಸರ್ಕಾರದ ಆಡಳಿತವೇ ನಡೆಯುತ್ತದೆ.

ಅಕ್ರಮ ಗಣಿಗಾರಿಕೆ ತನಿಖೆಯ ವಿಷಯ:

ಅಕ್ರಮ ಗಣಿಗಾರಿಕೆ ತನಿಖೆಯನ್ನು ಲೋಕಾಯುಕ್ತಕ್ಕೆ ಒಪ್ಪಿಸಿರುವುದು ಖಂಡಿತ ಸರಿಯಲ್ಲ. ಈ ಕ್ರಮವು ಆಕ್ಷೇಪಾರ್ಹ. ಲೋಕಾಯುಕ್ತವು ರಾಜ್ಯ ಸರ್ಕಾರದ ಹಿಡಿತದಲ್ಲಿ ಇರುವುದು ಎನ್ನುವುದು ಖಂಡಿತವಾಗಿಯೂ ನನ್ನ ದೂರಲ್ಲ. ಆದರೆ ಲೋಕಾಯುಕ್ತಕ್ಕೆ ಅದರದೇ ಆದ ಮಿತಿಗಳಿವೆ ಎನ್ನುವುದು ನನ್ನ ವಾದ. ಅದು ರಾಜ್ಯದ ವ್ಯಾಪ್ತಿಯಿಂದ ಹೊರಗೆ ಹೋಗಿ ತನಿಖೆ ಮಾಡುವುದು ಖಂಡಿತ ಸಾಧ್ಯವಿಲ್ಲ. ಹಾಗೆ ಮಾಡುವಂಥ ಅಧಿಕಾರದ ವ್ಯಾಪ್ತಿಯೂ ಲೋಕಾಯುಕ್ತಕ್ಕೆ ಇಲ್ಲ. ಅದು ರಾಜ್ಯದಲ್ಲಿ ಲಭ್ಯವಾಗುವ ಮಾಹಿತಿಯ ಆಧಾರದಲ್ಲಿಯೇ ತನ್ನ ತನಿಖೆಯನ್ನು ನಡೆಸಬೇಕಾಗುತ್ತದೆ.

ಇಂಥದೊಂದು ಪ್ರಕರಣದ ತನಿಖೆಯು ನಡೆಸುವಾಗ ಅದಿರು ಸಾಗಣೆಯಾದ ವಿವಿಧ ಬಂದರುಗಳು ಇರುವ ರಾಜ್ಯಗಳಲ್ಲಿಯೂ ತನಿಖೆ ನಡೆಸಬೇಕಾಗುತ್ತದೆ. ಅಷ್ಟೇ ಅಲ್ಲ; ಅದಿರು ಖರೀದಿ ಮಾಡಿದ ವಿದೇಶಿ ಕಂಪೆನಿಗಳನ್ನೂ ವಿಚಾರಣೆ ಮಾಡುವ ಹಾಗೂ ಆ ಕಂಪೆನಿಗಳು ಹೊಂದಿರುವ ದಾಖಲೆ ಪತ್ರಗಳನ್ನು ಪರಿಶೀಲಿಸುವುದು ಅಗತ್ಯವಾಗುತ್ತದೆ. ಆದರೆ ರಾಜ್ಯದ ಪರಿಮಿತಿಯಲ್ಲಿರುವ ತನಿಖಾ ಸಂಸ್ಥೆಯು ರಾಜ್ಯದ ಗಡಿಯನ್ನು ದಾಟಿ ಹೋಗಿ ಪ್ರಭಾವಿಯಾಗಿ ತನಿಖೆ ಮಾಡುವುದು ಸಾಧ್ಯವೇ ಆಗದು. ಆದ್ದರಿಂದ ವಿಸ್ತೃತವಾದ ಅಧಿಕಾರವುಳ್ಳ ಸಿ.ಬಿ.ಐ. ಮಾತ್ರ ಇಂಥದೊಂದು ಪ್ರಕರಣವನ್ನು ಸಮರ್ಧವಾಗಿ ತನಿಖೆ ಮಾಡಲು ಸಾಧ್ಯ.

ಲೋಕಾಯುಕ್ತದಿಂದ ಸಾಧ್ಯವಾಗದ ಕೆಲಸ:

ಲೋಕಾಯುಕ್ತ ಏನು ಮಾಡಲು ಸಾಧ್ಯ? ಏನೂ ಇಲ್ಲ. ಈಗ ಅದು ಹೊಂದಿರುವ ಅಧಿಕಾರ ಎಷ್ಟು ಎನ್ನುವುದು ಮುಖ್ಯ ಲೋಕಾಯುಕ್ತರ ರಾಜೀನಾಮೆ ಪ್ರಹಸನವೇ ಸಾಕ್ಷಿ. ಲೋಕಾಯುಕ್ತಕ್ಕೆ ಒಂದು ಸೀಮಿತವಾದ ಚೌಕಟ್ಟಿದೆ. ಅದು ಅದರಿಂದ ಮುಕ್ತವಾಗಿ ರಾಜ್ಯದ ಹೊರಗೆ ಹಾಗೂ ವಿದೇಶದಲ್ಲಿರುವ ಕಂಪೆನಿಗಳ ಕಡೆಗೆ ಹೋಗಿ ದಾಖಲೆಗಳನ್ನು ಪರಿಶೀಲನೆ ಮಾಡುವುದು ಖಂಡಿತವಾಗಿ ಆಗದ ಕೆಲಸ.

ಅಕ್ರಮ ಗಣಿಗಾರಿಕೆ ವಿಷಯವು ಕೇವಲ ರಾಜ್ಯದ ಸಮಸ್ಯೆ ಆಗಿಲ್ಲ. ಅದು ದೇಶದ ಸಮಸ್ಯೆಯಾಗಿದೆ. ಕರ್ನಾಟಕದ ಅದಿರುಯುಕ್ತ ಮಣ್ಣು ವಿದೇಶಕ್ಕೆ ಹೋಗಿರುವುದು ದೇಶದ ವಿವಿಧ ರಾಜ್ಯಗಳಲ್ಲಿರುವ ಬಂದರುಗಳಿಂದ. ಅಷ್ಟೇ ಅಲ್ಲ; ಅದಿರುಯುಕ್ತ ಮಣ್ಣು ಖರೀದಿಸಿರುವ ಕಂಪೆನಿಗಳು ವಿದೇಶದಲ್ಲಿನವು. ಸ್ಥಿತಿ ಹೀಗಿರುವಾಗ ರಾಜ್ಯದ ಚೌಕಟ್ಟಿನಲ್ಲಿ ಕೆಲಸ ಮಾಡುವ ಲೋಕಾಯುಕ್ತ ಇಂಥದೊಂದು ಮಹಾ ಹಗರಣವನ್ನು ತನಿಖೆ ಮಾಡುವುದು ಸಾಧ್ಯವೇ ಇಲ್ಲ.

ತನಿಖೆ ವ್ಯಾಪ್ತಿ:

ಅಕ್ರಮ ಗಣಿಗಾರಿಕೆಯು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತನಿಖೆ ನಡೆಯಬೇಕಾದ ವಿಷಯ. ತನಿಖೆಯ ವ್ಯಾಪ್ತಿಯೂ ಹೆಚ್ಚು. ಆದ್ದರಿಂದ ಸಿ.ಬಿ.ಐ. ತನಿಖೆ ನಡೆಯುವುದೇ ಹೆಚ್ಚು ಸೂಕ್ತ. ಅದರ ಹೊರತಾಗಿ ಬೇರೆ ಮಾರ್ಗವೇ ಇಲ್ಲ. ಲೋಕಾಯುಕ್ತ ತನಿಖೆ ನಡೆದರೂ ಅದು ಒಪ್ಪುವಂಥದಾಗಿರುವುದಿಲ್ಲ ಎನ್ನುವುದನ್ನು ಈಗಲೇ ನಾನು ಸ್ಪಷ್ಟವಾಗಿ ಹೇಳುತ್ತೇನೆ. ಅದನ್ನು ನಾಡಿನ ಜನರು ಖಂಡಿತವಾಗಿ ಒಪ್ಪುವುದಿಲ್ಲ. ಆದ್ದರಿಂದ ತನಿಖೆಯ ವ್ಯಾಪ್ತಿಯನ್ನು ಪರಿಗಣಿಸಿ ಸಿ.ಬಿ.ಐ. ತನಿಖೆಗೆ ಒಪ್ಪಿಸಬೇಕು ಎನ್ನುವುದು ನನ್ನ ಒತ್ತಾಯ.

ಸಿ.ಬಿ.ಐ. ಮಾತ್ರ ನಂಬಲರ್ಹ ತನಿಖೆ ಮಾಡಲು ಸಾಧ್ಯ:

ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಅಕ್ರಮ ಗಣಿಗಾರಿಕೆ ವಿಷಯವನ್ನು ಸಿ.ಬಿ.ಐ.ಗೆ ನೀಡುವ ಮೂಲಕ ದಿಟ್ಟ ಹೆಜ್ಜೆ ಇಡಬೇಕು. ಆಗಲೇ ಒಂದೇ ಏಟಿಗೆ ಎಲ್ಲ ಸಮಸ್ಯೆ ನಿವಾರಣೆಗೆ ಪರಿಹಾರ ಮಾರ್ಗ ಕಂಡುಕೊಂಡಂತಾಗುತ್ತದೆ. ಸಿ.ಬಿ.ಐ. ಕೇಂದ್ರ ಸರ್ಕಾರದ ನಿಯಂತ್ರಣದ ಕೈಗೊಂಬೆ ಎನ್ನುವ ರೀತಿಯಲ್ಲಿ ಯಡಿಯೂರಪ್ಪ ಅವರು ಯೋಚನೆ ಮಾಡುತ್ತಿರುವುದು ಅರ್ಥವಿಲ್ಲದ್ದು. ಹಾಗೆ ಮಾಡುವ ಅಗತ್ಯವೂ ಇಲ್ಲ.

ಸಿ.ಬಿ.ಐ. ವಿರೋಧ ಪಕ್ಷದ ನಾಯಕರೂ ಇರುವಂಥ ಆಯ್ಕೆ ಸಮಿತಿಯಿಂದ ನೇಮಕವಾದ ನಿರ್ದೇಶಕರನ್ನು ಹೊಂದಿದೆ. ಜಾಗೃತ ಆಯೋಗದ ಮೇಲ್ವಿಚಾರಣೆಯಲ್ಲಿ ಸಿಬಿಐ ಕಾರ್ಯನಿರ್ವಹಿಸಬೇಕಾಗುತ್ತದೆ ಎನ್ನುವುದನ್ನೂ ಮರೆಯುವಂತಿಲ್ಲ. ಅಷ್ಟೇ ಅಲ್ಲ ಸಿ.ಬಿ.ಐ. ತನ್ನ ತನಿಖೆಯ ಪ್ರತಿಯೊಂದು ಹಂತದ ಮಾಹಿತಿ ಹಾಗೂ ಅಂತಿಮ ವರದಿಯನ್ನು ಸಲ್ಲಿಸುವುದು ಸರ್ಕಾರಕ್ಕೆ ಅಲ್ಲ. ವರದಿ ಸಲ್ಲಿಸುವುದು ಸುಪ್ರೀಂ ಕೋರ್ಟ್ ಮುಂದೆ ಮಾತ್ರ ತಾನು ಕಲೆಹಾಕಿದ ಮಾಹಿತಿ ಹಾಗೂ ತನಿಖಾ ವರದಿಯನ್ನು ಸಲ್ಲಿಸುತ್ತದೆ.

ಅನೇಕ ಸಂದರ್ಭದಲ್ಲಿ ಬಿ.ಜೆ.ಪಿ. ಕೂಡ ಸಿ.ಬಿ.ಐ. ತನಿಖೆಗೆ ಅನೇಕ ಪ್ರಕರಣಗಳನ್ನು ಒಪ್ಪಿಸಲು ಒತ್ತಾಯ ಮಾಡಿತ್ತು. ಅಷ್ಟೇ ಅಲ್ಲ ಅನೇಕ ಪ್ರಕರಣಗಳು ಸಿ.ಬಿ.ಐ. ಮೂಲಕ ತೃಪ್ತಿಕರ ತನಿಖೆಯಿಂದ ಪರಿಹಾರ ಕಂಡಿವೆ. ಸಿ.ಬಿ.ಐ. ಕಳೆದ ಆರು ದಶಕಗಳಲ್ಲಿ ತನ್ನ ನ್ಯಾಯೋಚಿತವಾದ ಹಾಗೂ ದಕ್ಷತೆಯುಳ್ಳ ತನಿಖೆಯಿಂದ ವಿಶ್ವಾಸ ಗಳಿಸಿದೆ. ಇಂಥದೊಂದು ತನಿಖಾ ಸಂಸ್ಥೆಯ ಮೇಲೆ ವಿಶ್ವಾಸ ಹೊಂದಿ, ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಅಕ್ರಮ ಗಣಿಗಾರಿಕೆಯ ವಿಷಯವನ್ನೂ ಸಿ.ಬಿ.ಐ.ಗೆ ಒಪ್ಪಿಸಬೇಕು ಎನ್ನುವುದು ನನ್ನ ಒತ್ತಾಯ.

ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರಂತೆ:

ಗಣಿಗಾರಿಕೆಯನ್ನೇ ನಿಷೇಧಿಸುವ ಮುಖ್ಯಮಂತ್ರಿಯವರ ತೀರ್ಮಾನವು ಹಾಸ್ಯಾಸ್ಪದವಾಗಿದೆ. ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರಂತೆ ಹಾಗೆ ಆಗಿದೆ. ನಿಷೇಧವು ಖಂಡಿತವಾಗಿ ಪರಿಹಾರವಲ್ಲ. ಆಥರ್ಿಕ ಪ್ರಗತಿಗೆ ನಾಡಿನ ಸಂಪತ್ತಿನ ಪ್ರಯೋಜನ ಆಗಬೇಕು. ಆದರೆ ಅದು ಕೆಲವರು ಆರ್ಧಿಕವಾಗಿ ಬಲಗೊಳ್ಳುವುದಕ್ಕೆ ಮಾರ್ಗವಾಗಬಾರದು. ಗಣಿಗಾರಿಕೆಯು ವ್ಯವಸ್ಥಿತವಾಗಿ ಒಂದು ಮಿತಿಯಲ್ಲಿ ನಡೆಯಬೇಕು. ಆದರೆ ಬಹುಬೇಗ ಹಣವನ್ನು ಗುಡ್ಡೆಮಾಡಿಕೊಳ್ಳಬೇಕು ಎನ್ನುವ ಆತುರದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಅದಿರುಯುಕ್ತ ಮಣ್ಣನ್ನು ಕೊಳ್ಳೆ ಹೊಡೆಯಲಾಗಿದೆ.

ಹಿಂದಿನ ಸರ್ಕಾರಗಳು ಗಣಿಗಾರಿಕೆಗೆ ಅನುಮತಿ ನೀಡಿದ್ದು ಎಂದು ಮೈಕೊಡವಿಕೊಳ್ಳುವ ಪ್ರಯತ್ನವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ. ಆದರೆ ವಾಸ್ತವವೇ ಬೇರೆಯಾಗಿದೆ. ಗಣಿಧಣಿಗಳು ಕಳೆದ ಎರಡು ವರ್ಷಗಳ ಅವಧಿಯಲ್ಲಿ ರಾಜ್ಯದಿಂದ ಅಕ್ರಮವಾಗಿ ಸಾಗಿಸಿರುವ ಅದಿರುಯುಕ್ತ ಮಣ್ಣಿನ ಪ್ರಮಾಣ ಅಪಾರ. ಅದಕ್ಕೆ ಸಾಕ್ಷಿಯಾಗಿ ನಿಂತಿವೆ, ಗಣಿಗಾರಿಕೆ ನಡೆದಲ್ಲಿನ ಮಹಾ ಕಂದಕಗಳು. ಅವುಗಳು ರಾಜ್ಯದ ಭೊಕ್ಕಸಕ್ಕೆ ಆಗಿರುವ ನಷ್ಟದ ಸಂಕೇತ ಎನ್ನುವಂತೆ ನಮ್ಮೆದುರಿಗೆ ಇವೆ. ಅಲ್ಪ ಕಾಲದಲ್ಲಿ ಇಷ್ಟೆಲ್ಲಾ ಕೊಳ್ಳೆ ಹೊಡೆ ನಂತರ ಈಗ ನಿಷೇಧ ಎನ್ನುವ ಮಂತ್ರ ಪಠಣ ನಡೆಸಿರುವುದು ಖಂಡಿತ ಒಪ್ಪುವಂಥದಲ್ಲ.

ನಾಡಿನ ಹಿತ ಬಯಸುವ

ಬಿ.ಬಿ.ರಾಮಸ್ವಾಮಿ ಗೌಡ
ಶಾಸಕರು, ಕುಣಿಗಲ್ ವಿಧಾನಸಭಾ ಕ್ಷೇತ್ರ