ಆನೆಗಳ ಜೀವಕ್ಕೆ ಎರವು...!


ಈ ಚಿತ್ರವನ್ನು ನೋಡಿ; ಇದರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹೊತ್ತುಕೊಂಡಿರುವುದು ಆನೆಯ ಬೃಹತ್ತಾದ ದಂತ. ಕಳ್ಳಸಾಗಣೆ ಮಾಡುತ್ತಿದ್ದ ಈ ದೊಡ್ಡ ದಂತವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಘಟನೆ ನಡೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಳ್ಳಿಯಲ್ಲಿ. ಈ ಭಾಗದ ಅರಣ್ಯದಲ್ಲಿ ಅವ್ಯಾಹತವಾಗಿ ದಂತ ಕಳ್ಳಸಾಗಣೆ ನಡೆಯುತ್ತಿದೆ ಎನ್ನುವುದಕ್ಕೆ ಇದು ಸ್ಪಷ್ಟವಾದ ಸಾಕ್ಷಿ. ವಿಶೇಷ ಗಮನಿಸಿ ಈ ಆನೆ ದಂತವು ಎಂಟು ಅಡಿ ಎರಡು ಅಂಗುಲ ಉದ್ದವಾಗಿದೆ. ತೂಕ ಸುಮಾರು ಐವತ್ತು ಕೆ.ಜಿ. ಆಗಿದೆ.

ಕಾಡಿನಲ್ಲಿ ಗಸ್ತು ಬಿಗಿಗೊಳಿಸಿ ಪೋಚರ್ಸ್ ಅಟ್ಟಹಾಸ ನಡೆಯದಂತೆ ಮಾಡುವಲ್ಲಿ ಸೂಕ್ತ ಕ್ರಮ ಕೈಗೊಂಡರೆ, ಭವಿಷ್ಯದಲ್ಲಿ ಮತ್ತೆ ಇಂಥ ಘಟನೆಗಳು ನಡೆಯುವುದಿಲ್ಲ. ಈ ದಂತದ ಗಾತ್ರವನ್ನು ಗಮನಿಸಿದರೆ; ಪೋಚರ್ಸ್ ದಾಳಿಗೆ ಬಲಿಯಾದ ಈ ಗಂಡು ಅನೆಯ ಗಾತ್ರ ಎಂಥದೆನ್ನುವುದೂ ಸ್ಪಷ್ಟವಾಗುತ್ತದೆ. ರಾಜ್ಯದಲ್ಲಿ ಆನೆಗಳ ರಕ್ಷಣೆಗೆ ಸೂಕ್ತ ಕ್ರಮವನ್ನು ಕೈಗೊಳ್ಳದಿದ್ದ ಪಕ್ಷದಲ್ಲಿ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ಎನ್ನುವ ಕೀರ್ತಿಯನ್ನು ಕರ್ನಾಟಕ ಕಳೆದುಕೊಳ್ಳುವ ಅಪಾಯವಿದೆ.

ಆದ್ದರಿಂದ ಅರಣ್ಯ ಇಲಾಖೆಗೆ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಜೊತೆಗೆ ಅರಣ್ಯ ಸಿಬ್ಬಂದಿಗಳಿಗೆ ಸೌಲಭ್ಯಗಳನ್ನು ಕಲ್ಪಿಸಬೇಕು. ಆಗಲೇ ಕಾಡಿನಲ್ಲಿರುವ ವನ್ಯಜೀವಿಗಳು ಸುರಕ್ಷಿತವಾಗಬಹುದು. ಸೌಲಭ್ಯಗಳ ಕೊರತೆ ಇರುವ ಕಾರಣ ಅರಣ್ಯ ಕಾವಲುಗಾರರು ತಮ್ಮ ಹೊಣೆಯನ್ನು ಸಮರ್ಪಕವಾಗಿ ನಿಭಾಯಿಸಲು ಆಗುವುದಿಲ್ಲ. ಜೊತೆಗೆ ಸಂಪರ್ಕ ವ್ಯವಸ್ಥೆಯ ಕೊರತೆಯೂ ಇದೆ. ಈ ಕಾರಣಕ್ಕಾಗಿಯೇ ಪೋಚರ್ಸ್ (ಕಾಡುಗಳ್ಳರು) ವಿರುದ್ಧ ಕಾರ್ಯಾಚರಣೆ ಮಾಡುವುದು ಅವರಿಗೆ ಕಷ್ಟವಾಗುತ್ತಿದೆ.

ಈ ನಿಟ್ಟಿನಲ್ಲಿ ಸರ್ಕಾರವು ಗಮನ ಹರಿಸುವ ಅಗತ್ಯವಿದೆ. ಕರ್ನಾಟಕದಲ್ಲಿರುವ ಇಂಥ ಬೃಹತ್ ಗಾತ್ರದ ಆನೆಗಳು ಮರೆಯಾಗಿ ಹೋಗದಂತೆ ಮಾಡಲು ಕಾಡಿನ ರಕ್ಷಣೆಗೆ ಬಲ ನೀಡುವುದು ಅಗತ್ಯ ಮಾತ್ರವಲ್ಲ ಅನಿವಾರ್ಯ.