ತುರ್ತಾಗಿ ಚಿಕಿತ್ಸೆ ಸಿಗದೇ ಸತ್ತು ಹೋಯಿತು ಆನೆ

ನಾನೀಗ ಪ್ರಸ್ತಾಪ ಮಾಡುತ್ತಿರುವ ವಿಷಯ ಗಂಭೀರವಾದದ್ದು. ಹೌದು; ಇದು ಬಹಳ ಗಂಭೀರವಾದ ವಿಷಯ. ಯಾಕೆಂದರೆ ಇದು ಆನೆಗಳಿಗೆ ಸಂಬಂಧಿಸಿದ್ದು. ಹೌದು; ಆನೆಗಳ ಪಾಡು ನೋಡೋದಕ್ಕೆ ಆಗೋದಿಲ್ಲ! ಅಯ್ಯೋ ಪಾಪ; ಅನಿಸುತ್ತೆ...!

ನಾನು ಇಲ್ಲಿ ಹೇಳುತ್ತಿರುವುದು ನಾಡಿನಲ್ಲಿ ಇರುವ "ಬಿಳಿಯಾನೆ"ಗಳ ಬಗ್ಗೆ ಅಲ್ಲ. ಇದು ಕಾಡಿನಲ್ಲಿ ಪಡಬಾರದ ಪಾಡು ಪಡುತ್ತಿರುವ ಆನೆಗಳ ವಿಷಯ...!

ಅದೆಷ್ಟೊಂದು ಕಾಡಾನೆಗಳು ಗಾಯಗೊಂಡಿವೆ; ಅವುಗಳು ತಮ್ಮ ಹಿಂಡಿನಿಂದ ದೂರವೂ ಆಗಿವೆ. ಅಂಥ ಅನೇಕ ಆನೆಗಳ ಬಗ್ಗೆ ನಾವೆಲ್ಲಾ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಓದಿದ್ದೇವೆ ಹಾಗೂ ದೃಶ್ಯಗಳ ರೂಪದಲ್ಲಿ ನೋಡಿ ಮರುಗಿದ್ದೇವೆ. ಅಷ್ಟಕ್ಕೆ ಮುಗಿಯಿತು; ಆನಂತರ ಆ ಕಾಡಾನೆಗಳ ವಿಷಯವನ್ನು ಮರೆತುಬಿಟ್ಟಿದ್ದೇವೆ.

ಇಲ್ಲಿ ನೋಡಿ; ಈ ಚಿತ್ರಗಳಲ್ಲಿ ಒಂದು ಆನೆಯಿದೆ. ನೋವು ತಾಳಲಾರದೆ ತಿಂಗಳುಗಟ್ಟಲೇ ಇದು ಬಳಲಿತು. ಆನಂತರ ಕೊನೆಯುಸಿರೆಳೆಯಿತು. ಇದು ಸುಮಾರು ಆರು ವರ್ಷ ವಯಸ್ಸಿನ ಗಂಡು ಮರಿಯಾನೆ. ಅದರ ಮೊಣಕಾಲಿಗೆ ಗಾಯವಾಗಿತ್ತು. ಸುಮಾರು ಇಪ್ಪತ್ತೈದು ದಿನಗಳ ಹಿಂದಷ್ಟೇ ಇದು ಅರಣ್ಯ ಇಲಾಖೆಯ ಸಿಬ್ಬಂದಿಯ ಗಮನಕ್ಕೆ ಬಂದಿದ್ದು. ಅದಕ್ಕೂ ಮುನ್ನವೇ ಅದು ತನ್ನ ಎಡ ಮೊಣಕಾಲಿಗೆ ಗಾಯ ಮಾಡಿಕೊಂಡಿತ್ತು. ಗಾಯ ಆಗಿರುವ ಭಾಗದಲ್ಲಿ ಊದಿಕೊಂಡಿದ್ದರಿಂದ, ಒಂದು ಹೆಜ್ಜೆ ಕೂಡ ಕದಲಿಸದಂಥ ಕಷ್ಟದ ಸ್ಥಿತಿಯನ್ನು ಎದುರಿಸಿತು.

ಈ ಗಂಡು ಆನೆ ಮರಿಯು ಇಪ್ಪತ್ತೈದು ದಿನಗಳ ಹಿಂದಷ್ಟೇ ಆನೇಕಲ್ ಬಳಿಯಲ್ಲಿ, ಅಂದರೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಮಹದೇಶ್ವರ ರಕ್ಷಿತಾರಣ್ಯದಲ್ಲಿ ಸುಮಾರು ದಿನಗಳಿಂದ ಒಂದೇ ಸ್ಥಳದಲ್ಲಿ ನಿಂತುಕೊಂಡಿದ್ದನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಗುರುತಿಸಿದರು. ಆದರೆ ಮೊಟ್ಟ ಮೊದಲ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ್ದು ಮಾತ್ರ ಗುರುವಾರದಂದು ಅಂದರೆ ಜುಲೈ 15. 2010 (ಗುರುವಾರ) ರಂದು ಮಧ್ಯಾಹ್ನ 12.34ಕ್ಕೆ.

ನೋಡಿ ಅಷ್ಟು ಹೊತ್ತಿಗಾಗಲೇ ಅದೆಷ್ಟೊಂದು ನರಳಿತ್ತು ಈ ಗಂಡು ಆನೆಮರಿ. ನೋವನ್ನು ಸಹಿಸಿಕೊಂಡು, ಬಿದಿರು ಸೊಪ್ಪು ಕೂಡ ತಿನ್ನದೆಯೇ ಮೂಳೆಗಳು ಕಾಣುವಹಾಗೆ ಸೊರಗಿ ಹೋಗಿತ್ತು. ಆದರೂ ತುರ್ತಾಗಿ ಅದಕ್ಕೆ ಚಿಕಿತ್ಸೆ ಒದಗಿಸುವುದು ಸಾಧ್ಯವಾಗಲಿಲ್ಲ. ಅದರ ಪರಿಣಾಮವಾಗಿ ಅದೇ ಕಾಡಿನಲ್ಲಿ ನಿಂತ ಸ್ಥಳದಲ್ಲಿಯೇ ಕೊನೆಯುಸಿರೆಳೆದಿತು. ಅದು ಸಾವನ್ನಪ್ಪಿದ್ದು ಜುಲೈ 18. 2010 (ಭಾನುವಾರ) ರಂದು.

ಈ ಗಂಡು ಮರಿಯಾನೆಗೆ ತಕ್ಷಣವೇ ಚಿಕಿತ್ಸೆ ಹಾಗೂ ಒಂದಿಷ್ಟು ಆಹಾರವನ್ನು ಅದು ಇದ್ದ ಸ್ಥಳದಲ್ಲಿಯೇ ಒದಗಿಸುವುದು ಅಗತ್ಯವಾಗಿತ್ತು. ಆದರೆ ಹಾಗೆ ಮಾಡಲು ಆಗಲಿಲ್ಲ. ಇದಕ್ಕೆ ಕಾರಣ; ಅರಣ್ಯ ಇಲಾಖೆಯಲ್ಲಿ ನುರಿತ ಹಾಗೂ ವನ್ಯಜೀವಿಗಳ ಬಗ್ಗೆ ಕಳಕಳಿ ಹಾಗೂ ಕಾಳಜಿ ಹೊಂದಿದ ವೈದ್ಯಕೀಯ ಹಾಗೂ ಸಹಾಯಕ ಸಿಬ್ಬಂದಿಯ ಕೊರತೆ ಇರುವುದು. ಡಾಕ್ಟರ್ ಬಿ.ಸಿ.ಚಿಟ್ಟಿಯಪ್ಪ ಅವರನ್ನು ಬಿಟ್ಟರೆ ಅರಣ್ಯ ಇಲಾಖೆಯಲ್ಲಿ ಯಾರಿದ್ದಾರೆ ಆನೆಗಳ ಬಗ್ಗೆ ಕಾಳಜಿ ಹೊಂದಿದ ವೈದ್ಯರು? ಡಾ. ಚಿಟ್ಟಿಯಪ್ಪ ಅವರೇ ಈ ಆನೆಯ ಚಿಕಿತ್ಸೆಗೆ ಬರಬೇಕಾಯಿತು.

ಡಾಕ್ಟರ್ ಬಿ.ಸಿ. ಚಿಟ್ಟಿಯಪ್ಪ ಅವರು ಆ ಆನೆಯನ್ನು ತಲುಪುವುದಕ್ಕೆ ಮೊದಲೇ ಆನೆಗೆ ಒಂದಿಷ್ಟು ಕಾಳಜಿ ಮಾಡುವ ಅಗತ್ಯವಿತ್ತು. ಆದರೆ ಅದು ಆ ಭಾಗದ ರಕ್ಷಿತಾರಣ್ಯದಲ್ಲಿ ಸಾಧ್ಯವೇ ಆಗಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ತಕ್ಷಣಕ್ಕೆ ಕಾರ್ಯಪ್ರವೃತ್ತರಾಗಿ ಆನೆಯನ್ನು ತಲುಪಿ, ಅದಕ್ಕೆ ಚಿಕಿತ್ಸೆ ನೀಡುವುದಕ್ಕೆ ಅಗತ್ಯವಿರುವ ಸಾಧನಗಳು ಅಲ್ಲಿ ಇಲ್ಲವೇ ಇಲ್ಲ. ಅಲ್ಲಿ ಅಷ್ಟೇ ಏಕೆ; ರಾಜ್ಯದ ಯಾವುದೇ ಅರಣ್ಯ ಇಲಾಖೆಯ ವಿಭಾಗಗಳಲ್ಲಿ ವನ್ಯಜೀವಿಗಳಿಗೆ ಚಿಕಿತ್ಸೆ ಒದಗಿಸಲು ಅಗತ್ಯ ಸೌಲಭ್ಯ ಇಲ್ಲ. ಗುಣಮಟ್ಟದ ವೈದ್ಯಕೀಯ ಸೇವೆಯ ಕೊರತೆಯಂತೂ ಅಪಾರ.

ಕಾಡಾನೆಯ ಚಿಕಿತ್ಸೆಗೆ ಎಲ್ಲ ವೈದ್ಯಕೀಯ ಸಾಧನ ಹಾಗೂ ಅಗತ್ಯ ವಾಹನಗಳನ್ನು ಹೊಂದಿಸಿಕೊಳ್ಳುವ ಹೊತ್ತಿಗಾಗಲೇ ಎರಡು ಮೂರು ದಿನಗಳು ಕಳೆದು ಹೋಗುವಂಥ ಸ್ಥಿತಿ ಎಲ್ಲೆಡೆಯೂ ಇದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಮಹದೇಶ್ವರ ರಕ್ಷಿತಾರಣ್ಯದಲ್ಲಿಯೂ ಇದೇ ದುಸ್ಥಿತಿ ಇದೆ. ಮಾನ್ಯ ಮುಖ್ಯ ಮಂತ್ರಿಗಳೇ ಅರಣ್ಯ ಖಾತೆಯನ್ನು ಹೊಂದಿದ್ದಾರೆ. ಅವರು ಈ ಕಡೆಗೆ ಗಮನ ನೀಡುತ್ತಲೇ ಇಲ್ಲ. ಅವರ ಕಾಳಜಿಯು ಬೇರೆ "ಆನೆ"ಗಳನ್ನು ಕಾಪಾಡುವತ್ತಲೇ ಇದೆ. ಅವರು ತಮ್ಮ ಕುರ್ಚಿಗೆ ಆಸರೆಯಾಗಿರುವ "ಆನೆ"ಗಳ ಕಡೆಗೆ ಮಾತ್ರ ಗಮನ ನೀಡಿದ್ದಾರೆ.

ದಯಮಾಡಿ ಈ ರಾಜ್ಯದ ಅರಣ್ಯ ಖಾತೆಯನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿರುವ ಮಾನ್ಯ ಮುಖ್ಯಮಂತ್ರಿಗಳು ತಮ್ಮ ಸುತ್ತಲಿರುವ "ಗಜ"ಗಳ ಬಗ್ಗೆ ಮಾತ್ರ ಕಾಳಜಿ ಮಾಡುವುದನ್ನು ಬಿಟ್ಟು, ಕಾಡಿನಲ್ಲಿ ಇರುವ "ಗಜ" ಸಂತತಿಯ ಕಡೆಗೂ ಒಂದಿಷ್ಟು ಕಾಳಜಿ ತೋರಿಸಲಿ.

ಆ ನಿಟ್ಟಿನಲ್ಲಿ ಮುಖ್ಯವಾಗಿ ಅಗತ್ಯ ಇರುವ ವನ್ಯಜೀವಿ ವೈದ್ಯರನ್ನು ನೇಮಕ ಮಾಡಿಕೊಳ್ಳಬೇಕು. ಅಷ್ಟಕ್ಕೆ ಮುಗಿಯುವುದಿಲ್ಲ ಇನ್ನೂ ಸಾಕಷ್ಟು ಕೆಲಸಗಳು ಆಗಬೇಕು. ಅದೆಲ್ಲಕ್ಕಿಂತ ದೊಡ್ಡ ಹಾಗೂ ಮುಖ್ಯವಾದ ಅಗತ್ಯವೊಂದಿದೆ. ರಾಜ್ಯದಲ್ಲಿ "ಆನೆಗಳ ಪುನರ್ವಸತಿ ಕೇಂದ್ರ"ವೊಂದು ಸ್ಥಾಪನೆ ಆಗಲೇಬೇಕು.

"ಆನೆಗಳ ಪುನರ್ವಸತಿ ಕೇಂದ್ರ" ಸ್ಥಾಪನೆಯ ವಿಷಯದಲ್ಲಿ ಈಗಾಗಲೇ ಅರಣ್ಯ ಇಲಾಖೆಗೆ ಸ್ವಯಂ ಸೇವಾ ಸಂಸ್ಥೆಯೊಂದರಿಂದ ಮನವಿಯೂ ಹೋಗಿದೆ. ಅದರ ಕುರಿತು ನಾನು ಇಲ್ಲಿ ಒಂದಿಷ್ಟು ಮಾಹಿತಿ ನೀಡಲು ಬಯಸುತ್ತೇನೆ.

* ಗಾಯಗೊಂಡಿರುವ, ವಯಸ್ಸಾಗಿರುವ ಹಾಗೂ ಅಂಗವಿಕಲವಾಗಿರುವ ಕಾಡಾನೆಗಳು ಹಾಗೂ ಸಾಕಾನೆಗಳನ್ನು ನೋಡಿಕೊಳ್ಳುವುದಕ್ಕೆ ಕರ್ನಾಟಕದಲ್ಲಿ "ಆನೆಗಳ ಪುನರ್ವಸತಿ ಕೇಂದ್ರ"ವೊಂದನ್ನು ಸ್ಥಾಪಿಸುವುದು ಅಗತ್ಯವಾಗಿದೆ.

* ಕಾಡು ಆನೆಗಳೇ ತೀರ ವಿರಳವಾಗಿರುವ ಹರಿಯಾಣಾ ರಾಜ್ಯದಲ್ಲಿಯೇ "ಆನೆಗಳ ಪುನರ್ವಸತಿ ಕೇಂದ್ರ" ಸ್ಥಾಪಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಈಗ ಒಂದು ಅಂದಾಜಿನ ಪ್ರಕಾರ ಕಾಡು ಆನೆಗಳ ಸಂಖ್ಯೆಯೇ ಆರು ಸಾವಿರಕ್ಕೂ ಹೆಚ್ಚಿದೆ. ಅವುಗಳಲ್ಲಿ ಸಾಕಷ್ಟು ಗಾಯಗೊಂಡಿರುವ, ವಯಸ್ಸಾದ ಹಾಗೂ ಅಂಗವಿಕಲವಾಗಿರುವ ಆನೆಗಳೂ ಇವೆ. ಅವುಗಳಿಗಾಗಿ ಕರ್ನಾಟಕದಲ್ಲಿ ಒಂದು "ಆನೆಗಳ ಪುನರ್ವಸತಿ ಕೇಂದ್ರ" ಸ್ಥಾಪಿಸುವ ಯೋಚನೆಯನ್ನೇ ಸರ್ಕಾರ ಮಾಡುತ್ತಿಲ್ಲ.

* ಸ್ವಯಂ ಸೇವಾ ಸಂಸ್ಥೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಇಂಥದೊಂದು ಆನೆಗಳ ಪುನರ್ವಸತಿ ಕೇಂದ್ರವನ್ನು ಕರ್ನಾಟಕದಲ್ಲಿ ಸ್ಥಾಪಿಸುವುದು ಅಗತ್ಯ ಮಾತ್ರವಲ್ಲ ಅನಿವಾರ್ಯವೂ ಆಗಿದೆ. ಆದರೆ ಆ ಬಗ್ಗೆ ಸರ್ಕಾರವು ಕಾಳಜಿಮಾಡುತ್ತಿಲ್ಲ ಮತ್ತು ಆಸಕ್ತಿ ತೋರಿಸುತ್ತಿಲ್ಲ.

* "ಹೊಯ್ಸಳ ವೈಲ್ಡ್ ಲೈಫ್ ಕನ್ಸರ್ವೇಷನ್ ಸೊಸೈಟಿ"ಯು ಈಗಾಗಲೇ ಸ್ವಯಂ ಇಚ್ಛೆಯಿಂದ ಕರ್ನಾಟಕದಲ್ಲಿ "ಆನೆಗಳ ಪುನರ್ವಸತಿ ಕೇಂದ್ರ"ವನ್ನು ಸ್ಥಾಪಿಸಲು ಆಸಕ್ತಿ ತೋರಿಸಿದೆ. ಈ ಸ್ವಯಂ ಸೇವಾ ಸಂಸ್ಥೆಯು ಈಗಾಗಲೇ ಅಗತ್ಯವಾದ ದಾಖಲೆಗಳೊಂದಿಗೆ ಅರಣ್ಯ ಇಲಾಖೆಗೆ ಸಾಲುಸಾಲಾಗಿ ಪತ್ರಗಳನ್ನು ಬರೆದಿದ್ದು ಮಾತ್ರವಲ್ಲ; ಅರಣ್ಯ ಇಲಾಖೆ ಅಧಿಕಾರಿಗಳನ್ನು ಮುಖತಃ ಭೇಟಿಯಾಗಿ ವಿಷಯವನ್ನು ಕೂಡಾ ವಿವರಿಸಿದೆ.

* ಮುಖ್ಯ ವನ್ಯಜೀವಿ ಪರಿಪಾಲಕರಾದ ಬಿ.ಕೆ. ಸಿಂಗ್ ಅವರನ್ನು ಈ ವಿಷಯವಾಗಿ ಮಾಹಿತಿ ಕೇಳಲು ನಾನು ಕೂಡ ಅವರ ಕಚೇರಿಗೆ 11ನೇ ಜೂನ್, 2010ರಂದು ಹೋಗಿ ಮಾತನಾಡಿದ್ದೆ. ಆದರೆ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಈ ಬಗ್ಗೆ ಆಸಕ್ತಿಯೇ ಇಲ್ಲ. "ಆನೆಗಳ ಪುನರ್ವಸತಿ ಕೇಂದ್ರ ಎಂದರೇನು?" ಎನ್ನುವಂತೆ ಅವರು ಮರು ಪ್ರಶ್ನೆಯನ್ನು ಕೇಳುತ್ತಾರೆ.

* ಹತ್ತಾರು ಬಾರಿ ಈ ವಿಷಯವಾಗಿ "ಹೊಯ್ಸಳ ವೈಲ್ಡ್ ಲೈಫ್ ಕನ್ಸರ್ವೇಷನ್ ಸೊಸೈಟಿ" ಅವರು ಸಂಪೂರ್ಣವಾದ ಮಾಹಿತಿ ನೀಡಿದ್ದರೂ, ಅದರ ಕಡೆಗೆ ಕಣ್ಣೆತ್ತಿಯೂ ನೋಡದ ಮುಖ್ಯ ವನ್ಯಜೀವಿ ಪರಿಪಾಲಕರ ನಿರ್ಲಿಪ್ತತೆಯು ನನಗೂ ಅಚ್ಚರಿ ಮೂಡಿಸಿದೆ.

ಈ ಕುರಿತು ಅರಣ್ಯ ಇಲಾಖೆಯ ಜವಾಬ್ದಾರಿಯನ್ನೂ ಹೊಂದಿರುವ ಮಾನ್ಯ ಮುಖ್ಯ ಮಂತ್ರಿಗಳು ತಮ್ಮ ಸುತ್ತಲಿರುವ "ನಾಡಿನ ಆನೆ"ಗಳ ಬಗ್ಗೆ ಮಾತ್ರ ಕಾಳಜಿ ಮಾಡುವುದನ್ನು ಬಿಟ್ಟು; ಕಾಡಿನಲ್ಲಿ ನರಳುತ್ತಿರುವ ಆನೆಗಳ ಕುರಿತು ಕೂಡ ಒಂದಿಷ್ಟು ಯೋಚನೆ ಮಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ.

ತಮ್ಮ ವಿಶ್ವಾಸಿ
ಬಿ.ಬಿ. ರಾಮಸ್ವಾಮಿ ಗೌಡ
ಶಾಸಕರು,
ಕುಣಿಗಲ್ ವಿಧಾನಸಭಾ ಕ್ಷೇತ್ರ